36 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು
ಚಿಕ್ಕಮಗಳೂರು: ಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ರಚನೆ ಮಾಡಿದ ಮೊದಲ ದಿನವೇ ಕೊಪ್ಪ ತಾಲ್ಲೂಕಿನ 36 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕೊಪ್ಪ ತಾಲ್ಲೂಕಿನ ತನೂಡಿ ಸರ್ವೆ ನಂಬರ್ 9, 21, 22,23, 72 ಮತ್ತು 97 ಸೇರಿ ಒಟ್ಟು 36 ಎಕರೆ ಅರಣ್ಯ ಭೂಮಿಯನ್ನು ಅದರಲ್ಲಿದ್ದ ಕಾಫಿ ಗಿಡಗಳನ್ನು ಕತ್ತರಿಸಿಸುವಂತೆ ಸೂಚಿಸಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದರು. ಅರಣ್ಯ ರಕ್ಷಣೆಗೆ ಕಾರ್ಯಪಡೆ ಇದೆ. ಆದರೆ, ವಿಶೇಷವಾಗಿ ಪಶ್ಚಿಮಘಟ್ಟದ ಅರಣ್ಯ ಒತ್ತುವರಿ ತೆರವಿಗೆ ಸ್ಥಳೀಯವಾಗಿ ಕಾರ್ಯಪಡೆ ರಚನೆಯಾಗಬೇಕಿದೆ. ಮೊದಲ ದಿನ ತೆರವು ಕಾರ್ಯ ನಡೆಸಿರುವ ಅಧಿಕಾರಿಗಳು, ಸರ್ಕಾರದಿಂದ ಬರುವ ಮಾರ್ಗಸೂಚಿಗಾಗಿ ಕಾಯುತ್ತಿದ್ದಾರೆ.
ಇನ್ನೂ ಹಲವೆಡೆ ತೆರವು ಕಾರ್ಯಾಚರಣೆ ನಡೆಸಲು ಜಾಗ ಗುರುತಿಸುವ ಕೆಲಸ ಆರಂಭವಾಗಿದೆ. ಒಟ್ಟು 69 ಎಕರೆ ತೆರವುಗೊಳಿಸಲು ಸಿದ್ಧತೆಯನ್ನು ಅಧಿಕಾರಿಗಳು ನಡೆಸಿದ್ದರು. ಸೋಮವಾರ 36 ಎಕರೆ ತೆರವಾಗಿದ್ದು, ಬಾಕಿ ಒತ್ತುವರಿ ತೆರವು ಮಂಗಳವಾರ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಕೊಪ್ಪ ಉಪ ಅರಣ್ಯ ವ್ಯಾಪ್ತಿಯಲ್ಲಿ ತೆರವು ಕಾರ್ಯ ಆರಂಭ ವಾಗಿದೆ. ಚಿಕ್ಕಮಗಳೂರು ಉಪ ಅರಣ್ಯ ವ್ಯಾಪ್ತಿಯಲ್ಲೂ ಕಾರ್ಯಾ ಚರಣೆ ಆರಂಭಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.