ನವದೆಹಲಿ: ರೈತ ಸಂಘಟನೆಗಳು ಹಮ್ಮಿಕೊಂಡಿರುವ ‘ದೆಹಲಿ ಚಲೋ’ವನ್ನು ಗಮನದಲ್ಲಿಟ್ಟುಕೊಂಡು ಬವಾನಾ ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಕೇಂದ್ರದ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಗೃಹ ಸಚಿವ ಕೈಲಾಶ್ ಗೆಹಲೋತ್, ‘ರೈತರ ಬೇಡಿಕೆಗಳು ಸತ್ಯದಿಂದ ಕೂಡಿವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕಾಗಿದೆ. ಆದ್ದರಿಂದ ರೈತರನ್ನು ಬಂಧಿಸುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.
Delhi Government rejects the central government's proposal to convert Bawana Stadium into a jail in view of the farmers' march to Delhi today.
— ANI (@ANI) February 13, 2024
On the Centre's proposal, Delhi Government Home Minister Kailash Gehlot says "The demands of the farmers are genuine. It is the… pic.twitter.com/dxjvYTrKbq
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸಲು ಮುಂದಾಗಿದ್ದಾರೆ. ಆದರೆ, ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ತಂತಿ, ಮೊಳೆಗಳ ಪಟ್ಟಿ, ಸಿಮೆಂಟ್ ಇಟ್ಟಿಗೆ ಮತ್ತು ಕಂಟೈನರ್‌ಗಳನ್ನು ಇಡಲಾಗಿದೆ. ಜೊತೆಗೆ ಬೃಹತ್ ಸಂಖ್ಯೆಯ ಪೊಲೀಸ್ ಮತ್ತು ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಿಂಘು ಗಡಿಯಲ್ಲಿ ವಾಣಿಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳವಾರದ ನಂತರ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ. ಹರಿಯಾಣ ಅಧಿಕಾರಿಗಳು ಅಂಬಾಲಾ, ಜಿಂದ್, ಫತೇಹಾಬಾದ್ ಮತ್ತು ಕುರುಕ್ಷೇತ್ರದಲ್ಲಿ ಗಡಿಗಳಲ್ಲಿ ಸಿಮೆಂಟ್ ಇಟ್ಟಿಗೆ, ಕಬ್ಬಿಣದ ಮೊಳೆಗಳ ಪಟ್ಟಿಗಳನ್ನು ಅಡ್ಡಲಾಗಿ ಇರಿಸುವ ಮೂಲಕ ಮೂಲಕ ನಿರ್ಬಂಧಿಸಿದ್ದಾರೆ. ಅಲ್ಲದೆ ರಾಜ್ಯದ 15 ಜಿಲ್ಲೆಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಫೆ.13ರವರೆಗೆ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಯನ್ನು ಸ್ಥಗಿತ ಗೊಳಿಸಲಾಗಿದೆ. ಹರಿಯಾಣದ ಗಡಿ ಗ್ರಾಮಗಳ ರಸ್ತೆಗಳನ್ನೂ ಮುಚ್ಚಲಾಗಿದೆ. ದೆಹಲಿ–ರೋಹ್ಟಕ್ ಮತ್ತು ದೆಹಲಿ– ಬಹದೂರ್‌ಗಢ ರಸ್ತೆಗಳಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.