ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಇಂದು ‘ದೆಹಲಿ ಚಲೋ’:15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ, ಬಿಗಿ ಭದ್ರತೆ

Published 13 ಫೆಬ್ರುವರಿ 2024, 2:22 IST
Last Updated 13 ಫೆಬ್ರುವರಿ 2024, 2:22 IST
ಅಕ್ಷರ ಗಾತ್ರ

ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸಲು ಮುಂದಾಗಿದ್ದಾರೆ. ಆದರೆ, ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ತಂತಿ, ಮೊಳೆಗಳ ಪಟ್ಟಿ, ಸಿಮೆಂಟ್‌ ಇಟ್ಟಿಗೆ ಮತ್ತು ಕಂಟೈನರ್‌ಗಳನ್ನು ಇಡಲಾಗಿದೆ. ಜೊತೆಗೆ ಬೃಹತ್‌ ಸಂಖ್ಯೆಯ ಪೊಲೀಸ್‌ ಮತ್ತು ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭದ್ರತೆಯ ಫೋಟೊ ಮತ್ತು ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಹಂಚಿಕೊಂಡಿದೆ.

‘ಗಡಿಗಳಲ್ಲಿ ಡ್ರೋನ್‌ ಕಣ್ಗಾವಲಿಡಲಾಗಿದೆ. ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಪೊಲೀಸರು ಸಿದ್ಧರಾಗಿದ್ದಾರೆ’ ಎಂದು ಅಧಿಕಾರಿ ಯೊಬ್ಬರು ತಿಳಿಸಿದರು. ಚಂಡೀಗಢ ಮತ್ತು ಪಂಜಾಬ್‌ನ ಗಡಿಗಳಲ್ಲಿ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಸಿಂಘು ಗಡಿಯಲ್ಲಿ ಸೋಮವಾರದಿಂದಲೇ ವಾಣಿಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳವಾರದ ನಂತರ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ. ಹರಿಯಾಣ ಅಧಿಕಾರಿಗಳು ಅಂಬಾಲಾ, ಜಿಂದ್‌, ಫತೇಹಾಬಾದ್‌ ಮತ್ತು ಕುರುಕ್ಷೇತ್ರದಲ್ಲಿ ಗಡಿಗಳಲ್ಲಿ ಸಿಮೆಂಟ್‌ ಇಟ್ಟಿಗೆ, ಕಬ್ಬಿಣದ ಮೊಳೆಗಳ ಪಟ್ಟಿಗಳನ್ನು ಅಡ್ಡಲಾಗಿ ಇರಿಸುವ ಮೂಲಕ ಮೂಲಕ ನಿರ್ಬಂಧಿಸಿದ್ದಾರೆ. ಅಲ್ಲದೆ ರಾಜ್ಯದ 15 ಜಿಲ್ಲೆಗಳಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಅಂಬಾಲಾ, ಕುರುಕ್ಷೇತ್ರ, ಕೈತಾಲ್‌, ಜಿಂದ್, ಹಿಸಾರ್‌, ಫತೇಹಾಬಾದ್‌ ಮತ್ತು ಸಿರ್ಸಾದಲ್ಲಿ ಫೆ.13ರವರೆಗೆ ಇಂಟರ್ನೆಟ್‌ ಮತ್ತು ಎಸ್‌ಎಂಎಸ್‌ ಸೇವೆಯನ್ನು ಸ್ಥಗಿತ ಗೊಳಿಸಲಾಗಿದೆ. ಹರಿಯಾಣದ ಗಡಿ ಗ್ರಾಮಗಳ ರಸ್ತೆಗಳನ್ನೂ ಮುಚ್ಚಲಾಗಿದೆ. ದೆಹಲಿ–ರೋಹ್ಟಕ್ ಮತ್ತು ದೆಹಲಿ– ಬಹದೂರ್‌ಗಢ ರಸ್ತೆಗಳಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಲವು ಅಹವಾಲುಗಳನ್ನು ಹೊತ್ತ ಅನ್ನದಾತರ ಪ್ರತಿಭಟನೆಗೆ ಭಾರಿ ಅಡ್ಡಿಗಳು ಎದುರಾಗಿದ್ದು, 2020ರಲ್ಲಿ ನಡೆದಿದ್ದ ‘ರೈತರ ಆಂದೋಲನ’ವನ್ನು ನೆನಪಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT