ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದಲ್ಲಿ ಮಹಿಳಾ ಮೀಸಲು: ಸಿಜೆಐಗೆ ಪತ್ರ

Published 23 ಸೆಪ್ಟೆಂಬರ್ 2023, 16:18 IST
Last Updated 23 ಸೆಪ್ಟೆಂಬರ್ 2023, 16:18 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಸಿಜೆಐ ಡಿ.ವೈ. ಚಂದ್ರಚೂಡ್‌ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳಿಗೆ, ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಮಾಜಿ ಅಧ್ಯಕ್ಷ ವಿಕಾಸ್‌ ಸಿಂಗ್‌ ಪತ್ರ ಬರೆದಿದ್ದಾರೆ.

ದೇಶದಲ್ಲಿ ಒಟ್ಟು 25 ಹೈಕೋರ್ಟ್‌ಗಳಿವೆ. ಈ ಪೈಕಿ ಪಟ್ನಾ, ಉತ್ತರಾಖಂಡ, ತ್ರಿಪುರಾ, ಮೇಘಾಲಯ ಹಾಗೂ ಮಣಿಪುರ ಹೈಕೋರ್ಟ್‌ಗಳಲ್ಲಿ ಒಬ್ಬರೂ ಮಹಿಳಾ ನ್ಯಾಯಮೂರ್ತಿಗಳಿಲ್ಲ. ಉಳಿದ 20 ಹೈಕೋರ್ಟ್‌ಗಳಲ್ಲಿ 670 ಪುರುಷ ನ್ಯಾಯಮೂರ್ತಿಗಳಿದ್ದರೆ, ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಕೇವಲ 103 ಇದೆ‌ ಎಂದು ವಿಕಾಸ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಸಂಸತ್‌ನ ಉಭಯ ಸದನಗಳಲ್ಲಿ ಸಂವಿಧಾನ 128ನೇ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಮಂಜೂರಾಗಿರುವ ನ್ಯಾಯಮೂರ್ತಿಗಳ ಹುದ್ದೆಗಳ ಪೈಕಿ ಶೇ 33ರಷ್ಟು ಹುದ್ದೆಗಳನ್ನು ಮಹಿಳಾ ನ್ಯಾಯಮೂರ್ತಿಗಳಿಗೆ ಮೀಸಲಿಡುವ ಸಂಬಂಧ ವಿಶ್ವಾಸಾರ್ಹ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.

‘ಭಾರತವು ಸ್ವಾತಂತ್ರ್ಯಗೊಂಡ 76 ವರ್ಷಗಳ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಇಲ್ಲಿಯವರೆಗೆ 270 ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಈ ಪೈಕಿ 11 ಮಹಿಳಾ ನ್ಯಾಯಮೂರ್ತಿಗಳಿಗಷ್ಟೇ ದೇಶದ ಉನ್ನತ ನ್ಯಾಯಿಕ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಇಲ್ಲಿಯವರೆಗಿನ ನೇಮಕದಲ್ಲಿ ಮಹಿಳೆಯರ ಪಾಲು ಶೇ 4ರಷ್ಟಿರುವುದು ನಿರಾಶಾದಾಯಕವಾಗಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT