ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NewsClick FIR | ಭಾರತದ ಸಾರ್ವಭೌಮತ್ವ ಧಕ್ಕೆ ತರಲು ಚೀನಾ ಹಣ: ದೆಹಲಿ ಪೊಲೀಸ್

Published 6 ಅಕ್ಟೋಬರ್ 2023, 13:57 IST
Last Updated 6 ಅಕ್ಟೋಬರ್ 2023, 13:57 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಹಾಗೂ ದೇಶದ ವಿರುದ್ಧ ಅವಿಶ್ವಾಸ ಮೂಡಿಸಲು ಚೀನಾದಿಂದ ಭಾರಿ ಪ್ರಮಾಣದಲ್ಲಿ ಹಣ ಸಂದಾಯ ಆಗಿದೆ ಎಂದು ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್‌ ಸುದ್ದಿತಾಣದ ವಿರುದ್ಧ ದಾಖಲು ಮಾಡಿಕೊಂಡಿರುವ ‘ಪ್ರಥಮ ಮಾಹಿತಿ ವರದಿ’ಯಲ್ಲಿ (ಎಫ್‌ಐಆರ್‌) ಹೇಳಲಾಗಿದೆ. ಭಯೋತ್ಪಾದನೆಯ ನಿಗ್ರಹಕ್ಕೆ ಬಳಸಲಾಗುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ಅಡಿಯಲ್ಲಿ ನ್ಯೂಸ್‌ಕ್ಲಿಕ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2019ರ ಲೋಕಸಭಾ ಚುನಾವಣೆಯ ಪ್ರಕ್ರಿಯೆಯನ್ನು ಹಾಳುಗೆಡವಲು ನ್ಯೂಸ್‌ಕ್ಲಿಕ್‌ ಪ್ರಧಾನ ಸಂಪಾದಕ ಹಾಗೂ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರು ಪೀಪಲ್ಸ್‌ ಅಲಯನ್ಸ್ ಫಾರ್ ಡೆಮಾಕ್ರಸಿ ಆ್ಯಂಡ್ ಸೆಕ್ಯುಲರಿಸಂ (ಪಿಎಡಿಎಸ್) ಗುಂಪಿನ ಜೊತೆ ಪಿತೂರಿ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಪಿಎಡಿಎಸ್‌ ಸಂಯೋಜಕಿ ಭಟ್ಟಿನಿ ರಾವ್, ಇತಿಹಾಸಕಾರ ದಿಲೀಪ್ ಸಿಮಿಯೋನ್, ಸಾಮಾಜಿಕ ಕಾರ್ಯಕರ್ತ ದೀಪಕ್ ಧೋಲಾಕಿಯಾ, ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ ಅಮನ್ ಟ್ರಸ್ಟ್‌ನ ನಿರ್ದೇಶಕ ಜಮಾಲ್ ಕಿದ್ವಾಯಿ ಮತ್ತು ಪತ್ರಕರ್ತರಾದ ಕಿರಣ್ ಶಹೀನ್ ಅವರು ಈ ಪಿತೂರಿಯಲ್ಲಿ ಭಾಗಿ ಎಂದು ಹೇಳಲಾಗಿದೆ.

ವಿದೇಶಿ ಹಣವನ್ನು ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಚಾರಾಂದೋಲನ ವಿಭಾಗದ ಸಕ್ರಿಯ ಸದಸ್ಯ ನೆವಿಲ್ಲೆ ರಾಯ್ ಸಿಂಘಮ್ ಎನ್ನುವವರು ಅಕ್ರಮವಾಗಿ ನೀಡಿದ್ದಾರೆ ಎಂದು ಎಫ್‌ಐಆರ್‌ ಹೇಳಿದೆ. ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್‌ ಸುದ್ದಿತಾಣಕ್ಕೆ ಎಫ್‌ಐಆರ್ ಪ್ರತಿಯನ್ನು ಶುಕ್ರವಾರ ತಲುಪಿಸಿದ್ದಾರೆ. ಪ್ರತಿಯನ್ನು ನೀಡುವಂತೆ ದೆಹಲಿಯ ನ್ಯಾಯಾಲಯವೊಂದು ಗುರುವಾರ ಆದೇಶಿಸಿತ್ತು.

ಚೀನಾದ ಶಓಮಿ, ವಿವೊನಂತಹ ದೈತ್ಯ ಟೆಲಿಕಾಂ ಕಂಪನಿಗಳು ಭಾರತದಲ್ಲಿ ಸಾವಿರಾರು ಶೆಲ್ ಕಂಪನಿಗಳನ್ನು ಆರಂಭಿಸಿವೆ. ಪಿತೂರಿಯ ಭಾಗವಾಗಿ ಭಾರತಕ್ಕೆ ವಿದೇಶಿ ಹಣ ರವಾನಿಸಲು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿ ಶೆಲ್ ಕಂಪನಿಗಳನ್ನು ಆರಂಭಿಸಲಾಗಿದೆ ಎಂದು ಕೂಡ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

‘ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಮತ್ತು ಭಾರತದ ವಿರುದ್ಧ ಅವಿಶ್ವಾಸ ಮೂಡಿಸುವ ಪಿತೂರಿಯ ಭಾಗವಾಗಿ, ಚೀನಾದಿಂದ ಭಾರಿ ಪ್ರಮಾಣದಲ್ಲಿ ಹಣವನ್ನು ಸುತ್ತುಬಳಸಿನ ಮಾರ್ಗದಲ್ಲಿ ಹಾಗೂ ಮರೆಮಾಚಿದ ಬಗೆಯಲ್ಲಿ ರವಾನಿಸಲಾಗಿದೆ. ದೇಶದ ಆಂತರಿಕ ನೀತಿಗಳನ್ನು, ಅಭಿವೃದ್ಧಿ ಯೋಜನೆಗಳನ್ನು ಟೀಕಿಸಲು, ಚೀನಾ ಸರ್ಕಾರದ ಯೋಜನೆಗಳನ್ನು ಪ್ರಚುರಪಡಿಸಲು, ಅವುಗಳನ್ನು ಸಮರ್ಥಿಸಿಕೊಳ್ಳಲು ಹಣ ಪಡೆದು ರೂಪಿಸಿದ ಸುದ್ದಿಗಳನ್ನು ಹರಿಬಿಡಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಈ ವಿದೇಶಿ ಹಣವನ್ನು ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಾಖಾ ಅವರಿಗೆ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಸಹವರ್ತಿಗಳಿಗೆ, ತೀಸ್ತಾ ಅವರ ಪತಿ ಜಾವೇದ್ ಆನಂದ್ ಅವರಿಗೆ, ಪತ್ರಕರ್ತರಾದ ಊರ್ಮಿಳೇಶ್, ಅರಾತ್ರಿಕಾ ಹಲ್ದರ್, ಪರಂಜಯ್ ಗುಹಾ ಠಾಕುರ್ತ ಮತ್ತು ಅಭಿಸಾರ್ ಶರ್ಮ ಅವರಿಗೆ ಹಂಚಿರುವ ಶಂಕೆ ಇದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

ಗೃಹಬಂಧನದಲ್ಲಿ ಇರುವ ನವಲಾಖಾ ಅವರು 1991ರಿಂದಲೂ ಪುರಕಾಯಸ್ಥ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಅಲ್ಲದೆ, ಪಿಪಿಕೆ ನ್ಯೂಸ್‌ಕ್ಲಿಕ್‌ ಸ್ಟೂಡಿಯೊ ಪ್ರೈ.ಲಿ. ಕಂಪನಿಯ ಷೇರುದಾರ ಕೂಡ ಹೌದು ಎಂದು ಎಫ್‌ಐಆರ್‌ ಹೇಳಿದೆ.

‘ಪಾಕಿಸ್ತಾನದ ಐಎಸ್‌ಐ ಏಜೆಂಟ್ ಆಗಿರುವ ಗುಲಾಮ್ ನಬು ಫಾಯ್ ಜೊತೆ ನವಲಾಖಾ ಅವರು ರಾಷ್ಟ್ರವಿರೋಧಿ ಸಂಪರ್ಕ ಹೊಂದಿದ್ದಾರೆ. ಪ್ರಬೀರ್, ನೆವಿಲ್ಲೆ ಮತ್ತು ಶಾಂಘೈನಲ್ಲಿ ನೆವಿಲ್ಲೆ ಅವರು ಹೊಂದಿರುವ ಸ್ಟಾರ್‌ಸ್ಟ್ರೀಮ್‌ ಕಂಪನಿಯ ನೌಕರರ ನಡುವೆ ವಿನಿಮಯ ಆಗಿರುವ ಇ–ಮೇಲ್‌ಗಳು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶವು ಭಾರತದ ಭಾಗವಲ್ಲ ಎಂದು ತೋರಿಸಲು ಅವರು ಹೊಂದಿದ್ದ ಇರಾದೆಯನ್ನು ಬಹಿರಂಗಪಡಿಸುತ್ತಿವೆ’ ಎಂದು ಎಫ್‌ಐಆರ್‌ ಆರೋಪಿಸಿದೆ.

ಕೋವಿಡ್–19 ಸಾಂಕ್ರಾಮಿಕವನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ನಡೆಸಿದ್ದ ಯತ್ನಗಳಿಗೆ ಕೆಟ್ಟ ಹೆಸರು ತರಲು ಸುಳ್ಳು ಸಂಕಥನವೊಂದನ್ನು ಹರಿಬಿಡಲಾಗಿತ್ತು ಎಂದು ಕೂಡ ಆರೋಪಿಸಲಾಗಿದೆ. ಪುರಕಾಯಸ್ಥ ಹಾಗೂ ನ್ಯೂಸ್‌ಕ್ಲಿಕ್‌ ಸುದ್ದಿತಾಣದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT