ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit | ವಿಶ್ವಾಸದ ಕೊರತೆ ಹೆಚ್ಚಿಸಿದ ಸಂಘರ್ಷ: ಪ್ರಧಾನಿ ಮೋದಿ

Published 9 ಸೆಪ್ಟೆಂಬರ್ 2023, 16:13 IST
Last Updated 9 ಸೆಪ್ಟೆಂಬರ್ 2023, 16:13 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದ ಜಗತ್ತು ಹೊರಬಂದ ಬಳಿಕ ನಡೆಯುತ್ತಿರುವ ಸಂಘರ್ಷವು ವಿಶ್ವಾಸದ ಕೊರತೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದರು. ರಷ್ಯಾ ಹಾಗೂ ಉಕ್ರೇನ್‌ ನಡುವೆ ವರ್ಷದಿಂದ ನಡೆಯುತ್ತಿರುವ ಯುದ್ಧವನ್ನು ನೇರವಾಗಿ ಉಲ್ಲೇಖಿಸದೆ ಮೋದಿ ಅವರು ಈ ಮಾತುಗಳನ್ನು ಹೇಳಿದರು. 

ರಾಷ್ಟ್ರ ರಾಜಧಾನಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಶನಿವಾರ ಆರಂಭವಾಗಿರುವ ‘ಜಿ–20 ಶೃಂಗಸಭೆ’ಯಲ್ಲಿ ಜಗತ್ತಿನ ನಾಯಕರ ಸಮ್ಮುಖದಲ್ಲಿ ಅವರು ಮಾತನಾಡಿದರು. ಜಾಗತಿಕ ನಂಬಿಕೆ ಹೆಚ್ಚಿಸುವಂತಹ ಕ್ರಮಗಳ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. 

‘ಕೋವಿಡ್‌– 19 ಸಾಂಕ್ರಾಮಿಕದ ಬಳಿಕ ನಂಬಿಕೆಯ ಕೊರತೆಯ ದೊಡ್ಡ ಬಿಕ್ಕಟ್ಟು ವಿಶ್ವವನ್ನು ಅಪ್ಪಳಿಸಿದೆ. ಯುದ್ಧಗಳು ಇದನ್ನು ಇನ್ನಷ್ಟು ಗಾಢವಾಗಿಸಿವೆ. ನಾವು ಪರಸ್ಪರ ಕೋವಿಡ್‌–19 ಎದುರಿಸಿದಂತೆ ವಿಶ್ವಾಸದ ಕೊರತೆಯನ್ನೂ ಎದುರಿಸಬಹುದು’ ಎಂದು ಅಭಿಪ್ರಾಯಪಟ್ಟರು. 

ಇಂದು ‘ಜಿ–20’ಯ ಅಧ್ಯಕ್ಷತೆ ವಹಿಸಿರುವ ಭಾರತವು ಇಡೀ ವಿಶ್ವವನ್ನು ಒಂದಾಗುವಂತೆ ಮತ್ತು ಮೊತ್ತಮೊದಲನೆಯದಾಗಿ ಜಾಗತಿಕ ವಿಶ್ವಾಸದ ಕೊರತೆಯನ್ನು ನೀಗಿಸುವಂತೆ ಆಹ್ವಾನಿಸುತ್ತಿದೆ ಎಂದು ಅವರು ಹೇಳಿದರು. 

ಇದು ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಹಾಕುವ ಸಮಯ ಮತ್ತು ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್ ಮತ್ತು ಸಬ್‌ ಕಾ ಪ್ರಯಾಸ್‌’ ಮಂತ್ರವು ನಮ್ಮೆಲ್ಲರಿಗೂ ದಾರಿದೀಪ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. 

‘ಜಾಗತಿಕ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ ಆಗಿರಲಿ, ಉತ್ತರ–ದಕ್ಷಿಣ ವಿಭಜನೆ ಅಥವಾ ಪೂರ್ವ–ಪಶ್ಚಿಮದ ಅಂತರ ಸೃಷ್ಟಿಯಾದುದಿರಲಿ, ಆಹಾರ, ಇಂಧನ ಮತ್ತು ರಸಗೊಬ್ಬರದ ನಿರ್ವಹಣೆಯಿರಲಿ, ಭಯೋತ್ಪಾದನೆ ಹೋರಾಟವಿರಲಿ, ಸೈಬರ್‌ ಭದ್ರತೆಯ ನಿರ್ವಹಣೆ ಅಥವಾ ಆರೋಗ್ಯ, ಇಂಧನ ಮತ್ತು ನೀರಿನ ಭದ್ರತೆಯ ಖಾತರಿಯಂತಹ ಯಾವುದೇ ವಿಷಯವಿರಲಿ, ಈ ಸವಾಲುಗಳಿಗೆ ಸದೃಢ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕು. ಇದು ವಾಸ್ತವಕ್ಕಾಗಿ ಮಾತ್ರ ಅಲ್ಲ, ಭವಿಷ್ಯಕ್ಕಾಗಿ ಕೂಡಾ ಹೌದು’ ಎಂದು ಅವರು ತಿಳಿಸಿದರು. 

ಜಿ–20 ಶೃಂಗಸಭೆಯ ಸನಿಹದಲ್ಲಿರುವ ಪುರಾತನ ಸ್ತಂಭವೊಂದನ್ನು ಉಲ್ಲೇಖಿಸಿದ ನರೇಂದ್ರ ಮೋದಿ, ‘ನಾವೆಲ್ಲರೂ ಸೇರಿರುವ ಜಾಗದ ಕೆಲವು ಕಿ.ಮೀ. ದೂರದಲ್ಲಿ ಎರಡೂವರೆ ಸಾವಿರ ವರ್ಷದ ಪ್ರಾಕೃತ ಭಾಷೆಯ ಶಬ್ದಗಳನ್ನು ಹೊಂದಿರುವ ಸ್ತಂಭವೊಂದಿದೆ. ಅದರಲ್ಲಿ ಮಾನವತೆಯ ಕಲ್ಯಾಣ ಮತ್ತು ಸಂತೋಷವನ್ನು ಯಾವಾಗಲೂ ಖಾತರಿಪಡಿಸಬೇಕು ಎಂದು ಉಲ್ಲೇಖಿಸಿದೆ’ ಎಂದರು. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಭಾರತವು ಇಡೀ ಜಗತ್ತಿಗೆ ಮಾನವತೆಯ ಸಂದೇಶವನ್ನು ಸಾರಿದೆ ಎಂದು ಅವರು ನೆನಪಿಸಿದರು.

ಜಿ–20 ಶೃಂಗಸಭೆ ಮುಖ್ಯಾಂಶಗಳು

* ಜಿ20 ಗುಂಪಿಗೆ ಆಫ್ರಿಕನ್‌ ಒಕ್ಕೂಟ ಹೊಸದಾಗಿ ಸೇರ್ಪಡೆ

* ವಿಶ್ವದಾದ್ಯಂತ ಶೇ 20ರಷ್ಟು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆ ಹೆಚ್ಚಿಸುವ ಜಾಗತಿಕ ಜೈವಿಕ ಇಂಧನ ಕೂಟ ರಚನೆಯ ಘೋಷಣೆ

* ಭಾರತ , ಮಧ್ಯಪ್ರಾಚ್ಯ, ಯುರೋಪ್‌ ನಡುವೆ ಆರ್ಥಿಕ ಕಾರಿಡಾರ್‌ ಯೋಜನೆಗೆ ಚಿಂತನೆ 

* ಜಿ20 ರಾಷ್ಟ್ರಗಳ ಪರಿಸರ ಮತ್ತು ಹವಾಮಾನ ವೀಕ್ಷಣೆಗಾಗಿ ಉ‍ಪಗ್ರಹ ಯೋಜನೆ

* ಭಾರತ ಮತ್ತು ಬ್ರಿಟನ್‌ ನಡುವೆ ವ್ಯಾಪಾರ, ಹೂಡಿಕೆ ಕುರಿತು ಮೋದಿ ಹಾಗೂ ರಿಷಿ ಸುನಕ್‌ ದ್ವಿಪಕ್ಷೀಯ ಮಾತುಕತೆ

* ವಾಣಿಜ್ಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್‌ ನಡುವೆ ಪರಸ್ಪರ ಸಹಕಾರಕ್ಕೆ ಸಮ್ಮತಿ

* ವ್ಯಾ‍ಪಾರ, ವಾಣಿಜ್ಯ, ರಕ್ಷಣೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲು ಭಾರತ–ಇಟಲಿ ಒಪ್ಪಿಗೆ

* ಔತಣಕೂಟಕ್ಕೆ ಆಗಮಿಸಿದ ನಾಯಕರಿಗೆ ಸ್ವಾಗತ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT