ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲು ಹಳಿ ಮೇಲೆ ಸಿಲಿಂಡರ್ ಎಸೆದ ಕಿಡಿಗೇಡಿಗಳು: ತಪ್ಪಿದ ಅನಾಹುತ

Published : 9 ಸೆಪ್ಟೆಂಬರ್ 2024, 3:41 IST
Last Updated : 9 ಸೆಪ್ಟೆಂಬರ್ 2024, 13:57 IST
ಫಾಲೋ ಮಾಡಿ
Comments

ಕಾನ್ಪುರ: ಹಳಿಗಳ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಕಲಿಂದಿ ಎಕ್ಸ್‌ಪ್ರೆಸ್‌ ಭಾನುವಾರ ರಾತ್ರಿ 8.20ರ ಸುಮಾರಿಗೆ ಡಿಕ್ಕಿ ಹೊಡೆದಿದೆ. ಆದರೆ, ಲೊಕೊಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ಸಿಲಿಂಡರ್‌ ಜೊತೆಯಲ್ಲಿ ಪೆಟ್ರೋಲ್‌ ತುಂಬಿದ ಬಾಟಲಿ, ಬೆಂಕಿಪೊಟ್ಟಣ ಹಾಗೂ ಸಿಹಿತಿಂಡಿಗಳಿದ್ದ ಬಾಕ್ಸ್‌ ಕೂಡ ಪತ್ತೆಯಾಗಿದೆ.

‘ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಹರಿಯಾಣದ ಭಿವನೀ ಜಿಲ್ಲೆಗೆ ಕಲಿಂದಿ ಎಕ್ಸ್‌ಪ್ರೆಸ್‌ ಹೊರಟಿತ್ತು. ಇಲ್ಲಿನ ಶಿವರಾಜ್‌ಪುರ ಪ್ರದೇಶದಲ್ಲಿ ಸಿಲಿಂಡರ್‌ ಇರಿಸಲಾಗಿತ್ತು. ವೇಗವಾಗಿ ಸಂಚರಿಸುತ್ತಿದ್ದ ರೈಲು ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಆದರೆ, ಲೊಕೊಪೈಲಟ್‌ ತಕ್ಷಣವೇ ತುರ್ತುಬ್ರೇಕ್‌ ಹಾಕಿದ್ದರಿಂದ ಅನಾಹುತ ತಪ್ಪಿತು’ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದರು.

‘ಡಿಕ್ಕಿ ಹೊಡೆದ ಪರಿಣಾಮ, ಸಿಲಿಂಡರ್‌ ಹಳಿಯಿಂದ ದೂರ ಹೋಗಿ ಬಿದ್ದಿತ್ತು. ಈ ಬಗ್ಗೆ ಲೊಕೊಪೈಲಟ್ ಮಾಹಿತಿ ನೀಡಿದರು. ತಕ್ಷಣವೇ ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್‌) ಘಟನಾ ಸ್ಥಳಕ್ಕೆ ಧಾವಿಸಿತು. ಹಾನಿಗೊಳಗಾದ ಸಿಲಿಂಡರ್‌ ಅನ್ನು ಪತ್ತೆ ಹಚ್ಚಲಾಗಿದೆ. ವಿಧಿವಿಜ್ಞಾನ ತಂಡ ರಾತ್ರಿಯೇ ಶಿವರಾಜ್‌ಪುರ ತಲುಪಿತು’ ಎಂದು ಉಪ ಪೊಲೀಸ್‌ ಆಯುಕ್ತ (ಪಶ್ಚಿಮ) ರಾಜೇಶ್‌ ಕುಮಾರ್ ಸಿಂಗ್‌ ವಿವರಿಸಿದರು.

ರೈಲ್ವೆ ಇಲಾಖೆಯಿಂದ ದೂರು: ಘಟನೆ ಸಂಬಂಧ ರೈಲ್ವೆ ಇಲಾಖೆಯು ಶಿವರಾಜ್‌ಪುರ ಠಾಣೆಯಲ್ಲಿ ದೂರು ದಾಖಲಿಸಿದೆ. ರೈಲನ್ನು ಹಳಿತಪ್ಪಿಸಲೆಂದೇ ಕೆಲವರು ಹಳಿಯ ಮೇಲೆ ಸಿಲಿಂಡರ್‌, ಪೆಟ್ರೋಲ್‌ ತುಂಬಿದ ಬಾಟಲಿ ಹಾಗೂ ಬೆಂಕಿಪೊಟ್ಟಣಗಳನ್ನು ಇರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸ್ಫೋಟಕ ಕಾಯ್ದೆ ಹಾಗೂ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ತನಿಖೆಗೆ ಐದು ತಂಡಗಳನ್ನು ಸರ್ಕಾರ ರಚಿಸಿದೆ.

ನಾವು ಎಲ್ಲಾ ರೀತಿಯಿಂದಲೂ ತನಿಖೆ ನಡೆಸಬೇಕಿದೆ. ತನಿಖೆ ಪೂರ್ಣಗೊಳ್ಳದ ಹೊರತೂ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ
ಪ್ರಶಾಂತ್‌ ಕುಮಾರ್‌, ಪೊಲೀಸ್‌ ಮಹಾ ನಿರ್ದೇಶಕ
ರೈಲು ಹಳಿತಪ್ಪಿ ದುರಂತ ಸಂಭವಿಸಬೇಕು ಎಂಬ ಕಾರಣಕ್ಕಾಗಿಯೇ ಹಳಿಗಳ ಮೇಲೆ ಸಿಲಿಂಡರ್‌ ಇರಿಸಲಾಗಿತ್ತು 
ರಾಜೇಶ್‌ ಕುಮಾರ್ ಸಿಂಗ್‌, ಉಪ ಪೊಲೀಸ್‌ ಆಯುಕ್ತ (ಪಶ್ಚಿಮ)

ಭಯೋತ್ಪಾದಕ ಕೃತ್ಯ ಶಂಕೆ

‘ಹಳಿಗಳ ಮೇಲೆ ಸಿಲಿಂಟರ್‌ ಇರಿಸಿದ್ದು ಹಾಗೂ ಕೆಲವು ಅನುಮಾನಾಸ್ಪದ ವಸ್ತುಗಳು ದೊರೆತ ಕಾರಣ ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ತಂಡವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ’ ಎಂದು ಪೊಲೀಸರು ತಿಳಿಸಿದರು.  ‘ಘಟನೆ ನಡೆದ ಹತ್ತಿರದಲ್ಲಿ ಎಲ್ಲಿಯಾದರೂ ಇಸ್ಲಾಂ ಧಾರ್ಮಿಕ ಸಮಾವೇಶ ನಡೆದಿತ್ತೆ ಎನ್ನುವ ಕುರಿತೂ ತನಿಖೆ ನಡೆಸಬೇಕು. ಜೊತೆಗೆ ಸಮಾವೇಶದಲ್ಲಿ ಭಾಗವಹಿಸಿದವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ನಿರ್ಧರಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಕಾನೂನು ಸುವ್ಯವಸ್ಥೆ) ಹರೀಶ್‌ ಚಂದ್ರ ಮಾಹಿತಿ ನೀಡಿದರು. ‘ಘಟನಾ ಸ್ಥಳದಲ್ಲಿ ಸಿಹಿತಿಂಡಿಗಳಿದ್ದ ಬಾಕ್ಸ್‌ವೊಂದು ದೊರೆತಿದೆ. ಇದನ್ನು ಕನೌಜ್‌ನ ಸಿಯಾರಾಮ್‌ ಸ್ವೀಟ್ಸ್‌ನಿಂದ ಖರೀದಿಸಲಾಗಿದೆ. ಈ ಬಾಕ್ಸ್‌ನ ಮೂಲ ಪತ್ತೆ ಹಚ್ಚಿದ್ದಲ್ಲಿ ತಪ್ಪಿತಸ್ಥರು ಸಿಕ್ಕಿಬೀಳಬಹುದು’ ಎಂದರು.

‘ಪ್ರೀತಿಯ ಅಂಗಡಿ’ ತೆರೆಯುವವರು ‘ದ್ವೇಷದ ಮಾರುಕಟ್ಟೆ’ ತೆರೆದಿದ್ದಾರೆ’

ಘಟನೆಯು ಅತ್ಯಂತ ಗಂಭೀರವಾಗಿದೆ. ಅಧಿಕಾರದ ಲಾಲಸೆಯಿಂದಾಗಿ ಕೆಲವರು ಹಾಗೂ ಕೆಲವು ಸಂಘಟನೆಗಳು ದೇಶದಲ್ಲಿ ಗಲಭೆ ಹಾಗೂ ಅರಾಜಕತೆ ಉಂಟಾಗಲಿ ಎಂದು ಬಯಸುತ್ತಿದ್ದಾರೆ. ಹಳಿಯಲ್ಲಿ ಸಿಲಿಂಡರ್‌ ಇಟ್ಟು ದುರಂತ ನಡೆಸಲು ಯತ್ನಿಸಿದವರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ‘ಪ್ರೀತಿಯ ಅಂಗಡಿ’ಯ ಕುರಿತು ಮಾತನಾಡುವವರು ‘ದ್ವೇಷದ ಮಾರುಕಟ್ಟೆ’ಯನ್ನು ತೆರೆದಿದ್ದಾರೆ. ವಿಧ್ವಂಸಕಾರಿ ಶಕ್ತಿಗಳ ಜೊತೆಗೆ ನಿಲ್ಲುವುದರ ಕುರಿತು ಅವರು ಆಲೋಚಿಸಬೇಕು ಗೌರವ್‌ ಭಾಟಿಯಾ ಬಿಜೆಪಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT