ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರಿಗೆ ಸ್ಪಷ್ಟ ಮಾಹಿತಿ ನೀಡಿ: ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಕೇಂದ್ರ ಸಲಹೆ

Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಪರೀಕ್ಷಾರ್ಥ ಬಳಕೆಯ ಹಂತದಲ್ಲಿ ಇರುವ ಕೃತಕ ಬುದ್ಧಿಮತ್ತೆ ಉಪಕರಣಗಳನ್ನು ಬಳಕೆದಾರರಿಗೆ ನೀಡುವಾಗ, ಅವು ‍ಪರೀಕ್ಷೆಯ ಹಂತದಲ್ಲಿವೆ ಎಂಬುದನ್ನು ತಿಳಿಸಬೇಕು ಎಂದು ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಲಹೆ ನೀಡಿದೆ.

ಗೂಗಲ್‌ನ ಕೃತಕ ಬುದ್ಧಿಮತ್ತೆ ವೇದಿಕೆ ‘ಜೆಮಿನಿ’ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೇಳಿದ್ದ ಪ್ರಶ್ನೆಗಳಿಗೆ ನೀಡಿದ ಉತ್ತರವು ವಿವಾದ ಸೃಷ್ಟಿಸಿದ ನಂತರದಲ್ಲಿ ಕೇಂದ್ರವು ಈ ಸಲಹೆ ನೀಡಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ ಉಪಕರಣದ ಬಳಕೆ ಇರುವ ವೇದಿಕೆಗಳಲ್ಲಿ ಕಾನೂನು ಬಾಹಿರವಾದ ವಸ್ತು–ವಿಷಯ ಇರದಂತೆ ನೋಡಿಕೊಳ್ಳಬೇಕು ಎಂದು ಕೂಡ ಸಲಹೆಯಲ್ಲಿ ಹೇಳಲಾಗಿದೆ.

ಸಲಹೆಗಳನ್ನು ಪಾಲಿಸದೆ ಇದ್ದಲ್ಲಿ ಕ್ರಿಮಿನಲ್ ಕ್ರಮ ಎದುರಿಸಬೇಕಾಗುತ್ತದೆಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಚ್ಚರಿಕೆ ನೀಡಿದೆ.

ಪ್ರಧಾನಿ ಮೋದಿ ಅವರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ‘ಜೆಮಿನಿ’ ಆಕ್ಷೇಪಾರ್ಹ ಉತ್ತರಗಳನ್ನು ನೀಡಿತ್ತು. ಮೋದಿ ಅವರ ಬಗ್ಗೆ ನೀಡಿದ ಉತ್ತರಕ್ಕೆ ಕೇಂದ್ರ ಸರ್ಕಾರವು ಕಟುವಾದ ಪ್ರತಿಕ್ರಿಯೆ ನೀಡಿತ್ತು. ‘ಜೆಮಿನಿ’ ಉತ್ತರವು ಐ.ಟಿ. ಕಾನೂನಿನ ಉಲ್ಲಂಘನೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದರು.

‘ಗೂಗಲ್ ಜೆಮಿನಿ ವಿದ್ಯಮಾನವು ಬಹಳ ಮುಜುಗರ ಉಂಟುಮಾಡುವಂಥದ್ದು. ಆದರೆ, ಜೆಮಿನಿ ವೇದಿಕೆಯು ಇನ್ನೂ ಪರೀಕ್ಷೆಯ ಹಂತದಲ್ಲಿ ಇದೆ, ಅದು ವಿಶ್ವಾಸಾರ್ಹ ಎಂದು ನೆಚ್ಚಿಕೊಳ್ಳಲಾಗುವುದಿಲ್ಲ
ಎಂಬ ವಿವರಣೆ ನೀಡಿರುವುದು ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ಒಂದು ಆಧಾರ ಆಗುವುದಿಲ್ಲ’ ಎಂದು ಚಂದ್ರಶೇಖರ್ ಶನಿವಾರ ಹೇಳಿದರು.

‘ಪರೀಕ್ಷೆಯ ಹಂತದಲ್ಲಿ ಇರುವ ಹಾಗೂ ದೋಷಗಳು ಇರುವ ಕೃತಕ ಬುದ್ಧಿಮತ್ತೆ ಉಪಕರಣಗಳನ್ನು ಭಾರತದಲ್ಲಿ ಇಂಟರ್‌ನೆಟ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಿಸುವಾಗ, ಆ ಬಗ್ಗೆ ಬಳಕೆದಾರರಿಗೆ ವಿಷಯವನ್ನು ಸ್ಪಷ್ಟವಾಗಿ ತಿಳಿಸಬೇಕು ಎಂಬುದು ನನ್ನ ಸಲಹೆ. ನಂತರದಲ್ಲಿ ಕ್ಷಮೆ ಯಾಚಿಸಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಅವಕಾಶ ಇಲ್ಲ. ಭಾರತದ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಪ್ರತಿ ವೇದಿಕೆಯೂ ಬಳಕೆಗೆ ಸುರಕ್ಷಿತವಾಗಿರಬೇಕು, ವಿಶ್ವಾಸಾರ್ಹ ಆಗಿರಬೇಕು’ ಎಂದು ಅವರು ಹೇಳಿದರು.

ಯಾವುದೇ ಸಂಸ್ಥೆಯು ಪರೀಕ್ಷಾ ಹಂತದಲ್ಲಿ ಇರುವ ಅಥವಾ ವಿಶ್ವಾಸಾರ್ಹ ಅಲ್ಲದ ಕೃತಕ ಬುದ್ಧಿಮತ್ತೆ ಉಪಕರಣ ವನ್ನು ಬಳಕೆಗೆ ಬಿಡುಗಡೆ ಮಾಡುವ ಮೊದಲು ಸರ್ಕಾರದಿಂದ ಅನುಮತಿ ಪಡೆದಿರಬೇಕು ಎಂದು ಕೂಡ ಸಲಹೆ ಯಲ್ಲಿ ಸ್ಪಷ್ಟಪಡಿಸಲಾಗಿದೆ. ಅವುಗಳಲ್ಲಿ ದೋಷವು ಇರುವ ಸಾಧ್ಯತೆ ಇರುತ್ತದೆ, ಅವು ನೀಡುವ ಉತ್ತರವು ವಿಶ್ವಾಸಾರ್ಹ ಅಲ್ಲದೆಯೂ ಇರಬಹುದು ಎಂಬುದನ್ನು ಬಳಕೆದಾರರಿಗೆ ತಿಳಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT