ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರಿಂದ ರಾಷ್ಟ್ರಪತಿ ಆಡಳಿತ ಹೇರುವ ಬೆದರಿಕೆ: ಪಂಜಾಬ್‌ ಸಿ.ಎಂ ಮಾನ್

ಮಣಿಪುರ, ಹರಿಯಾಣ ರಾಜ್ಯಪಾಲರು ಅಲ್ಲಿನ ಸಿ.ಎಂಗಳಿಗೆ ನೋಟಿಸ್‌ ನೀಡಿದ್ದಾರೆಯೇ –ಮಾನ್‌
Published 26 ಆಗಸ್ಟ್ 2023, 14:02 IST
Last Updated 26 ಆಗಸ್ಟ್ 2023, 14:02 IST
ಅಕ್ಷರ ಗಾತ್ರ

ಚಂಡೀಗಢ: ‘ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬೆದರಿಕೆ ಒಡ್ಡುತ್ತಿದ್ದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಣಿಪುರ ಮತ್ತು ಹರಿಯಾಣದಲ್ಲಿ ಅಲ್ಲಿನ ರಾಜ್ಯಪಾಲರು ಮೌನವಾಗಿದ್ದಾರೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಶನಿವಾರ ಆರೋಪಿಸಿದ್ದಾರೆ.

‘ರಾಜ್ಯಪಾಲರ ಹೇಳಿಕೆಯನ್ನು ರಾಜ್ಯದ ಶಾಂತಿಪ್ರಿಯ ಜನರಿಗೆ ಒಡ್ಡಿದ ಬೆದರಿಕೆ ಎಂದೇ ನಾನು ಭಾವಿಸುತ್ತೇನೆ. ಸಂವಿಧಾನದ ವಿಧಿ 356ರ ಅನ್ವಯ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುವ ಬೆದರಿಕೆಯನ್ನು ರಾಜ್ಯಪಾಲರು ಒಡ್ಡಿದ್ದಾರೆ’ ಎಂದು ಹೇಳಿದರು.

‘ಸರ್ಕಾರಕ್ಕೆ ತಾವು ಬರೆದಿರುವ ಪತ್ರಗಳಿಗೆ ಶೀಘ್ರ ಉತ್ತರ ನೀಡದಿದ್ದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಶಿಫಾರಸು ಮಾಡಬೇಕಾದಿತು’ ಎಂದು ರಾಜ್ಯಪಾಲ ಪುರೋಹಿತ್ ಅವರು ಶುಕ್ರವಾರ ಹೇಳಿದ್ದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾನ್‌ ಅವರು, ‘ರಾಜ್ಯಪಾಲರು ಇದುವರೆಗೂ ನಮಗೆ 16 ಪತ್ರ ಬರೆದಿದ್ದಾರೆ. ಇವುಗಳಲ್ಲಿ ಒಂಬತ್ತು ಪತ್ರಗಳಿಗೆ ಉತ್ತರಿಸಲಾಗಿದೆ. ಬಾಕಿ ಪತ್ರಗಳಿಗೆ ಸಂಬಂಧಿಸಿದಂತೆ ಅಗತ್ಯ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಬರೆದ ಪತ್ರಗಳಿಗೆ ತಕ್ಷಣವೇ ಉತ್ತರ ನೀಡಬೇಕು ಎಂದು ರಾಜ್ಯಪಾಲರು ಆತುರಪಡಬಾರದು’ ಎಂದು ಹೇಳಿದರು.

ರಾಜ್ಯದಲ್ಲಿ ಮಾದಕವಸ್ತುಗಳ ಮಾರಾಟ, ಬಳಕೆ ತಡೆಗೆ ತಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಗಮವಾಗಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದು ವಿವರಿಸಿದರು.

‘ನೂಹ್‌ನಲ್ಲಿ ಸಂಭವಿಸಿದ ಹಿಂಸೆ, ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಹರಿಯಾಣದ ರಾಜ್ಯಪಾಲರು ಅಲ್ಲಿನ ಮುಖ್ಯಮಂತ್ರಿಗೆ ನೋಟಿಸ್‌ ನೀಡಿದ್ದಾರೆಯೇ ಎಂದು ನಾನು ರಾಜ್ಯಪಾಲರನ್ನು ಪ್ರಶ್ನಿಸುತ್ತೇನೆ. ಇಲ್ಲ. ಏಕೆಂದರೆ ಅಲ್ಲಿ ಅವರದೇ ಸರ್ಕಾರವಿದೆ. ಕೇಂದ್ರದಲ್ಲೂ ಆ ಪಕ್ಷದ್ದೇ ಆಡಳಿತವಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಕಾಳಜಿ ಹೊಂದಿರುವ ರಾಜ್ಯಪಾಲರು, ಮಣಿಪುರದಲ್ಲಿನ ಜನಾಂಗೀಯ ಗಲಭೆ, ಹಿಂಸೆ ಖಂಡಿಸಿ ಹೇಳಿಕೆಯನ್ನಾದರೂ ನೀಡಿದ್ದಾರೆಯೇ? ಸಂವಿಧಾನವು ಮಣಿಪುರಕ್ಕೆ ಅನ್ವಯಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಪಂಜಾಬ್‌ ದೆಹಲಿ ಕರ್ನಾಟಕ ಕೇರಳ ತಮಿಳುನಾಡು ತೆಲಂಗಾಣದ ರಾಜ್ಯಪಾಲರ ಹೆಸರು ಹೊರತುಪಡಿಸಿ ಹೆಚ್ಚಿನವರಿಗೆ ಇತರೆ ರಾಜ್ಯಗಳ ರಾಜ್ಯಪಾಲರ ಹೆಸರುಗಳು ಗೊತ್ತಿಲ್ಲ. ಏಕೆಂದರೆ ಆ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ
– ಭಗವಂತ ಮಾನ್‌ ಪಂಜಾಬ್ ಮುಖ್ಯಮಂತ್ರಿ

‘ಉತ್ತರ ಪ್ರದೇಶದಲ್ಲಿ ಮಾಧ್ಯಮಗಳ ಎದುರೇ ಕೊಲೆ ಆಗುತ್ತದೆ. ಅಲ್ಲಿನ ರಾಜ್ಯಪಾಲರು ಕಾನೂನು ಸ್ಥಿತಿ ಪ್ರಶ್ನಿಸಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದ್ದಾರೆಯೇ’ ಎಂದು ಕಟುವಾಗಿ ಪ್ರಶ್ನಿಸಿದರು.

ಶುಕ್ರವಾರವಷ್ಟೇ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದಿದ್ದ ರಾಜ್ಯಪಾಲರು, ‘ಸರ್ಕಾರ ಉತ್ತರ ನೀಡುವುದು ವಿಳಂಬ ಮಾಡುತ್ತಿರುವುದು ನನಗೆ ಬೇಸರವಾಗಿದೆ. ಹಿಂದಿನ ಪತ್ರಗಳಿಗೆ ಉತ್ತರ ಸಿಗದಿದ್ದರೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT