ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿಗೆ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ

Published 2 ಜನವರಿ 2024, 11:05 IST
Last Updated 2 ಜನವರಿ 2024, 11:05 IST
ಅಕ್ಷರ ಗಾತ್ರ

ನವದೆಹಲಿ: ವೈವಾಹಿಕ ಭಿನ್ನಾಭಿಪ್ರಾಯಗಳಿದ್ದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿ ತನ್ನ ಮಗು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021ರ ನಿಯಮ 50ರ ಪ್ರಕಾರ, ಸರ್ಕಾರಿ ಉದ್ಯೋಗಿ ಅಥವಾ ನಿವೃತ್ತ ಸರ್ಕಾರಿ ಉದ್ಯೋಗಿ ಮರಣದ ನಂತರ ಕುಟುಂಬ ಪಿಂಚಣಿ ಮಂಜೂರು ಮಾಡಬಹುದು.

ಮೃತ ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿದಾರರ ಸಂಗಾತಿ ಬದುಕಿದ್ದರೆ, ಕುಟುಂಬ ಪಿಂಚಣಿಯನ್ನು ಮೊದಲು ಸಂಗಾತಿಗೆ ನೀಡಲಾಗುತ್ತದೆ. ಮೃತ ಸರ್ಕಾರಿ ಉದ್ಯೋಗಿ/ಪಿಂಚಣಿದಾರರ ಸಂಗಾತಿ ಕುಟುಂಬ ಪಿಂಚಣಿಗೆ ಅನರ್ಹರಾದರೆ ಅಥವಾ ಮರಣ ಹೊಂದಿದರೆ, ‌ಇತರ ಕುಟುಂಬದ ಸದಸ್ಯರು ಕುಟುಂಬ ಪಿಂಚಣಿಗೆ ಅರ್ಹರಾಗುತ್ತಾರೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಈಗ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಮಹಿಳಾ ಉದ್ಯೋಗಿ ತನ್ನ ಮಗು ಅಥವಾ ಮಕ್ಕಳನ್ನು ತನ್ನ ಗಂಡನ ಬದಲು ಕುಟುಂಬ ಪಿಂಚಣಿಗಾಗಿ ನಾಮನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಈ ತಿದ್ದುಪಡಿ ವಿಚ್ಛೇದನ ಅರ್ಜಿ ಅಥವಾ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಸಂದರ್ಭಗಳಲ್ಲಿ ಮಹಿಳಾ ಸರ್ಕಾರಿ ಉದ್ಯೋಗಿ ಕುಟುಂಬ ಪಿಂಚಣಿಯನ್ನು ತನ್ನ ಪತಿ ಬದಲಿಗೆ ಅರ್ಹ ಮಗುವಿಗೆ ನಾಮನಿರ್ದೇಶನ ಮಾಡಲು ಅನುಮತಿಸುತ್ತದೆ ಎಂದು ಡಿಒಪಿಪಿಡಬ್ಲ್ಯೂ ಕಾರ್ಯದರ್ಶಿ ವಿ. ಶ್ರೀನಿವಾಸ್ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಸಮಾಲೋಚಿಸಿ ಡಿಒಪಿಪಿಡಬ್ಲ್ಯೂ ಈ ತಿದ್ದುಪಡಿಯನ್ನು ರೂಪಿಸಿದೆ ಎಂದು ಅವರು ಹೇಳಿದರು.

‘ಈ ತಿದ್ದುಪಡಿ ಪ್ರಗತಿಪರವಾಗಿದೆ ಮತ್ತು ಕುಟುಂಬ ಪಿಂಚಣಿ ಪ್ರಕರಣಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಅಧಿಕಾರ ನೀಡುತ್ತದೆ‌' ಎಂದು ಶ್ರೀನಿವಾಸ್ ತಿಳಿಸಿದರು.

ಒಂದೊಮ್ಮೆ ಮಹಿಳೆಯು ಸರ್ಕಾರಿ ನೌಕರರಾಗಿ ನಿವೃತ್ತರಾಗಿದ್ದರೆ ಹಾಗೂ ಅವರ ವಿಚ್ಛೇಧನ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದ್ದರೆ, ಪಿಂಚಣಿದಾರರು ತಮ್ಮ ಮರಣದ ನಂತರ ಪತಿ ಬದಲಾಗಿ, ಮಕ್ಕಳಿಗೆ ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ಸಂಬಂಧಪಟ್ಟ ಕಚೇರಿಯ ಮುಖ್ಯಸ್ಥರಿಗೆ ಲಿಖಿತವಾಗಿ ವಿನಂತಿಸಿಕೊಳ್ಳಬಹುದು ‌‌‌ ಎಂದು ಆದೇಶದಲ್ಲಿ ಹೇಳಲಾಗಿದೆ.

ಆದರೆ, ಮಹಿಳಾ ಉದ್ಯೋಗಿಯ ಅಥವಾ ಪಿಂಚಣಿದಾರಳ ಮರಣದ ನಂತರ ಆಕೆಯ ಮಕ್ಕಳು ಪಿಂಚಣಿಗೆ ಅರ್ಹರಾಗಿರದಿದ್ದರೆ ಪಿಂಚಣಿಯನ್ನು ಪತಿಗೇ ನೀಡಬೇಕು ಎಂದು ನಿಯಮದಲ್ಲಿ ಹೇಳಲಾಗಿದೆ.

ಮೃತ ಮಹಿಳಾ ಉದ್ಯೋಗಿ, ಪಿಂಚಣಿದಾರಳ ಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅಥವಾ ಮಕ್ಕಳಿಗೆ ಮಾನಸಿಕ ಕಾಯಿಲೆ ಇದ್ದಲ್ಲಿ, ಪಿಂಚಣಿಯನ್ನು ಪತಿಗೆ ನೀಡಬೇಕು. ಪತಿಯು, ಆ ಮಕ್ಕಳ ಪೋಷಕ ಆಗಿರಬೇಕು. ಆತ ಪೋಷಕನ ಜವಾಬ್ದಾರಿಯನ್ನು ತೊರೆದರೆ, ಕೌಟುಂಬಿಕ ಪಿಂಚಣಿಯ ಮೊತ್ತವು ಮಕ್ಕಳ ನಿಜವಾದ ಪೋಷಕನ ಮೂಲಕ ಪಾವತಿ ಆಗಬೇಕು. ಮಕ್ಕಳಿಗೆ 18 ವರ್ಷ ವಯಸ್ಸು ಆದ ನಂತರದಲ್ಲಿ ಪಿಂಚಣಿಯನ್ನು ಅವರಿಗೇ ನೇರವಾಗಿ ಪಾವತಿ ಮಾಡಲಾಗುತ್ತದೆ.

‘ಮಕ್ಕಳು ಪಿಂಚಣಿಗೆ ಅರ್ಹತೆಯನ್ನು ಕಳೆದುಕೊಂಡ ನಂತರದಲ್ಲಿ, ಪಿಂಚಣಿ ಮೊತ್ತವನ್ನು ಪತಿಗೆ ಆತನ ಜೀವಿತಾವಧಿಯವರೆಗೆ ಅಥವಾ ಆತ ಇನ್ನೊಂದು ಮದುವೆ ಆಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಪಾವತಿಸಬೇಕು’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT