ಅಹಮದಾಬಾದ್: ಜಾಗತಿಕ ಮಟ್ಟದ ವ್ಯಾಪಾರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಗುಜರಾತ್ ಅಂತರರಾಷ್ಟ್ರೀಯ ಆರ್ಥಿಕ ತಂತ್ರಜ್ಞಾನ ನಗರಿ (GIFT City)ಯಲ್ಲಿ ಮದ್ಯ ಬಳಕೆಯನ್ನು ರಾಜ್ಯ ಸರ್ಕಾರ ಮುಕ್ತಗೊಳಿಸಿದೆ.
ಆದರೆ, ರಾಜ್ಯದ ಇತರ ಪ್ರದೇಶಗಳಲ್ಲಿ ಮದ್ಯ ಮಾರಾಟದ ಮೇಲಿರುವ ನಿಷೇಧ ಮುಂದುವರಿಯಲಿದೆ.
ಗುಜರಾತ್ ರಾಜ್ಯ ಉದಯವಾದ ದಿನದಿಂದ ಮಹಾತ್ಮಾ ಗಾಂಧೀ ಅವರು ಹುಟ್ಟಿದ ರಾಜ್ಯದಲ್ಲಿ, ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಬಳಕೆಗೆ ನಿಷೇಧವಿದೆ.
ರಾಜ್ಯದ ಇತಿಹಾಸದಲ್ಲೇ ಮದ್ಯ ನಿಷೇಧ ತೆರವು ಮಾಡಿದ ಉದಾಹರಣೆ ಇದೇ ಮೊದಲು. ಸದ್ಯ ಅನುಮತಿಸಲಾಗಿರುವ ಗಿಫ್ಟ್ ಸಿಟಿಯಲ್ಲಿ ‘ವೈನ್ ಅಂಡ್ ಡೈನ್’ ಸೌಕರ್ಯಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಈ ಅವಕಾಶದ ಅನ್ವಯ ಗಿಫ್ಟ್ ಸಿಟಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಹೋಟೆಲ್‌ಗಳಿಗೆ ಮದ್ಯ ಪೂರೈಕೆಗೆ ಪರವಾನಗಿಯನ್ನು ಸರ್ಕಾರ ನೀಡಲಿದೆ. ರಾಜ್ಯ ಅಬಕಾರಿ ಇಲಾಖೆ ಇದನ್ನು ನಿರ್ವಹಿಸಲಿದೆ. ಸದ್ಯ ಗುಜರಾತ್‌ನ ಹೊರಗಿನವರು ನಿರ್ದಿಷ್ಟ ಮಾರಾಟ ಮಳಿಗೆಯಲ್ಲಿ ತಾತ್ಕಾಲಿಕ ಪರವಾನಗಿ ಸಹಿತ ಮದ್ಯ ಖರೀದಿಗೆ ಅವಕಾಶವಿದೆ.
ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಮನೀಶ್ ದೋಶಿ, ‘ಮದ್ಯ ಮಾರಾಟಕ್ಕೆ ಅವಕಾಶ ಇರುವ ರಾಜ್ಯಗಳಲ್ಲಿನ ಮಹಿಳೆಯರ ಸ್ಥಿತಿಯನ್ನು ಗಮನಿಸಿದರೆ, ಇದು ಸೃಷ್ಟಿಸಿದ ನರಕದ ದರ್ಶನವಾಗುತ್ತದೆ. ಮದ್ಯ ಸೇವನೆ ಕೇವಲ ಆರೋಗ್ಯವನ್ನು ಹಾಳು ಮಾಡುವುದಿಲ್ಲ. ಬದಲಿಗೆ ಸಮಾಜದ ಇಡೀ ವಾತಾವರಣವನ್ನೇ ಹಾಳುಗೆಡವುತ್ತದೆ. ಮದ್ಯ ಮಾರಾಟದಿಂದ ಬಂದ ಹಣದಿಂದ ಯಾವ ರಾಜ್ಯವೂ ಉದ್ದಾರವಾಗಿಲ್ಲ. ಮಹಾತ್ಮಾ ಗಾಂಧಿ, ಸರ್ಧಾರ್ ಪಟೇಲ್ ಅವರಂತಹ ಮಹನೀಯರು ಜನಿಸಿದ ನಾಡಿನಲ್ಲಿ ಇಂಥ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬಾರದಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.