ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಹೇಳುವುದರಲ್ಲಿ ಮೋದಿ ನಿಸ್ಸೀಮರು: ಮಲ್ಲಿಕಾರ್ಜುನ ಖರ್ಗೆ

Published : 2 ಅಕ್ಟೋಬರ್ 2024, 10:37 IST
Last Updated : 2 ಅಕ್ಟೋಬರ್ 2024, 10:37 IST
ಫಾಲೋ ಮಾಡಿ
Comments

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ವಾಗ್ದಾಳಿ ನಡೆಸಿದರು.

ಚರಖಿ ದಾದರಿ ಜಿಲ್ಲೆಯ ಬಧ್ರಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನ ಇಂದು. ಮಹಾತ್ಮ ಗಾಂಧಿ ನಮಗೆ ಸತ್ಯ ಮತ್ತು ಅಹಿಂಸೆಯ ಬಗ್ಗೆ ಹೇಳಿದ್ದಾರೆ. ಆದರೆ, ಈಗ ಅಧಿಕಾರದಲ್ಲಿ ಇರುವವರು ಎಷ್ಟು ಸತ್ಯ, ಎಷ್ಟು ಸುಳ್ಳು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

‘ಮೋದಿ ಅವರ ಅಸಂಖ್ಯಾತ ಸುಳ್ಳು ಮತ್ತು ಭರವಸೆಗಳ ಬಗ್ಗೆ ನಿಮಗೆ ತಿಳಿದಿದೆ. ಕಳೆದ ಹತ್ತು ವರ್ಷಗಳಲ್ಲಿ ಮಿತಿಯೇ ಇಲ್ಲದಷ್ಟು ಭರವಸೆಗಳನ್ನು ನೀಡಿದ್ದಾರೆ. ಚುನಾವಣೆಗೂ ಮೊದಲು ‘ಗೆದ್ದೆರೆ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮಾ ಮಾಡಲಾಗುವುದು ಎಂಬುದಾಗಿ ಹೇಳುತ್ತಾರೆ. ಆದರೆ, ಗೆದ್ದ ಬಳಿಕ ಚಕಾರ ಎತ್ತುವುದಿಲ್ಲ‘ ಎಂದು ಲೇವಡಿ ಮಾಡಿದರು.

‘ಹತ್ತು ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿ ಇರುವವರು ಸುಳ್ಳು ಹೇಳಬಹುದೇ? ಪಂಡಿತ್ ಜವಾಹರ್‌ ಲಾಲ್‌ ನೆಹರೂ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ ಅಥವಾ ರಾಜೀವ್‌ ಗಾಂಧಿ ಅವರು ಈ ರೀತಿ ಸುಳ್ಳು ಹೇಳಿದ್ದರೇ; ಇಲ್ಲ, ಯಾರೂ ಈ ರೀತಿ ಮಾಡಿರಲಿಲ್ಲ’ ಎಂದರು.

‘ಕಾಂಗ್ರೆಸ್‌ನವರು ಕಪ್ಪು ಹಣವನ್ನು ವಿದೇಶಗಳಲ್ಲಿ ಇಡುತ್ತಾರೆ. ಅದನ್ನು ವಾಪಸ್‌ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಪಾವತಿಸುತ್ತೇವೆ ಎಂದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಅವೆಲ್ಲ ಈಗ ಎಲ್ಲಿ ಹೋದವು’ ಎಂದು ಪ್ರಶ್ನಿಸಿದರು.

‘ಬಿಜೆಪಿಯು ಹರಿಯಾಣ ಚುನಾವಣೆ ಸಂದರ್ಭದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ. ಆದರೆ ಖಾಲಿ ಇರುವ 1.60 ಲಕ್ಷ ಹುದ್ದೆಗಳನ್ನೇ ಇನ್ನೂ ಭರ್ತಿ ಮಾಡಿಲ್ಲ’ ಎಂದು ಹರಿಹಾಯ್ದರು.

ರಾಜ್ಯದ ಜನರು ಭೂಪೇಂದ್ರ ಸಿಂಗ್ ಹೂಡಾ ಅವರ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಈಗಲೂ ನೆನಪಿಟ್ಟುಕೊಂಡಿದ್ದಾರೆ. ಪಕ್ಷವು ತಾನು ನೀಡಿದ್ದ ವಾಗ್ದಾನವನ್ನು ಈಡೇರಿಸಿದೆ. ಹೀಗಾಗಿ ಮತ್ತೆ ಮತ್ತೆ ಹೇಳುತ್ತೇನೆ; ಬಿಜೆಪಿಯು ‘ಸುಳ್ಳುಗಳ ಸರದಾರ’ ಮತ್ತು ಪ್ರಧಾನಿ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಆರೋಪಿಸಿದರು.

ದೇಶದ ಪ್ರಧಾನಮಂತ್ರಿಗಳಾಗಿದ್ದ ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ಹೋರಾಡಿದ್ದರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್‌’ ಎಂದು ಹೇಳಿದ್ದರು. ಆದರೆ ಬಿಜೆಪಿಯವರಿಗೆ ಈ ದೇಶದ ಸೈನಿಕರು ಮತ್ತು ಕೃಷಿಕರ ಬಗ್ಗೆ ಗೊತ್ತೇ ಇಲ್ಲ. ಅವರಿಗೆ ತಿಳಿದಿರುವುದು ಆರ್‌ಎಸ್‌ಎಸ್‌ ಅಜೆಂಡಾ ಒಂದೇ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಲ್ಲಿ ರೈತರು ಯಾರೂ ಇಲ್ಲ. ಹೀಗಾಗಿಯೇ ಅವರಿಗೆ ರೈತರ ನೋವು, ಸಂಕಟ ಗೊತ್ತಿಲ್ಲ ಎಂದು ಹೇಳಿದರು.

ಹರಿಯಾಣ ಚುನಾವಣೆಯು ಅಕ್ಟೋಬರ್‌ 5ರಂದು ನಡೆಯಲಿದೆ. ಅಕ್ಟೋಬರ್‌ 8ರಂದು ಮತ ಎಣಿಕೆ ನಡೆಯಲಿದೆ.

ಹರಿಯಾಣ ಜನರ ಆಯ್ಕೆ ಏನು: ಪ್ರಸಾದ್‌ ಪ್ರಶ್ನೆ
ಹರಿಯಾಣ ರಾಜ್ಯದ ಜನರು ಬಿಜೆಪಿಯ ಅಭಿವೃದ್ಧಿ ಆಧಾರಿತ 10 ವರ್ಷ ಮತ್ತು  ಕಾಂಗ್ರೆಸ್‌ನ ಹಗರಣ ಭ್ರಷ್ಟಾಷಾರ ಆಧಾರಿತ 10 ವರ್ಷ– ಇವುಗಳಲ್ಲಿ ಯಾವುದು ಬೇಕು ಎಂದು ಆಯ್ಕೆ ಮಾಡಿಕೊಳ್ಳಬಹುದು ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್‌ ಬುಧವಾರ ಹೇಳಿದರು. ರೋಹ್ಟಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವು ವಿಚಾರಗಳ ಬಗ್ಗೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಹರಿಯಾಣ ಕಾಂಗ್ರೆಸ್‌ ಘಟಕವನ್ನು ಉಲ್ಲೇಖಿಸಿ ‘ಇಲ್ಲಿನ ಕಾಂಗ್ರೆಸ್‌ ಎಂದರೆ ಅದು ಹೂಡಾ ಅವರ ಕಾಂಗ್ರೆಸ್‌.  ರಾಹುಲ್‌ ಗಾಂಧಿ ಅವರೂ ಇಲ್ಲಿಗೆ ಅನುಮತಿ ಪಡೆದೇ ಬರಬೇಕು. ರಾಹುಲ್‌ ಗಾಂಧಿ ಅವರಿಗೆ ಇಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಇಂಗಿತ ಇತ್ತು. ಆದರೆ ಹೂಡಾ ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದರು.
ದುಷ್ಟತನ, ಅನ್ಯಾಯದ ವಿರುದ್ಧದ ಹೋರಾಟ: ಪ್ರಿಯಾಂಕಾ
ಈ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಿರಿ. ಇದು ದುಷ್ಟತನ, ಅನ್ಯಾಯ, ಅಸತ್ಯ ವಿರುದ್ಧದ ಹೋರಾಟ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಕರೆ ನೀಡಿದರು. ಜುಲಾನಾದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಆಡಳಿತಾರೂಢ ಪಕ್ಷವು ಪ್ರತಿ ಹಂತದಲ್ಲಿಯೂ ಜನರಿಗೆ ದ್ರೋಹ ಬಗೆದಿದೆ’ ಎಂದು ಹೇಳಿದರು. ‘ನರೇಂದ್ರ ಮೋದಿ ಸರ್ಕಾರವು ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ವಿಫಲವಾಗಿದೆ. ಅದು ಎಲ್ಲವನ್ನೂ ಅಂಬಾನಿ ಮತ್ತು ಅದಾನಿಗೆ ನೀಡುತ್ತಿದೆ’ ಎಂದು ಆರೋಪಿಸಿದರು. ‘ಅಗ್ನಿವೀರರಿಗೆ ಪಿಂಚಣಿ ಸೌಲಭ್ಯ ಇಲ್ಲ. 4 ವರ್ಷ ಸೇವೆ ನಂತರ ಮತ್ತೆ ಅವರು ಉದ್ಯೋಗಕ್ಕೆ ಹುಡುಕಾಟ ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT