ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ತಡೆ ಆರೋಪ: ದೆಹಲಿ ಸರ್ಕಾರಕ್ಕೆ ತಿರುಗೇಟು ನೀಡಿದ ಹರಿಯಾಣ ಸಿಎಂ

Published 3 ಜೂನ್ 2024, 2:17 IST
Last Updated 3 ಜೂನ್ 2024, 2:17 IST
ಅಕ್ಷರ ಗಾತ್ರ

ಚಂಡೀಗಢ: ರಾಷ್ಟ್ರ ರಾಜಧಾನಿಗೆ ತನ್ನ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ತಮ್ಮ ರಾಜ್ಯದ ವಿರುದ್ಧ ದೆಹಲಿ ಸರ್ಕಾರ ಮಾಡಿರುವ ಆರೋಪವನ್ನು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಭಾನುವಾರ ಅಲ್ಲಗಳೆದಿದ್ದಾರೆ. ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಸಂಪನ್ಮೂಲದ ಸಮರ್ಪಕ ನಿರ್ವಹಣೆ ಮತ್ತು ಹಂಚಿಕೆಯತ್ತ ಗಮನ ಹರಿಸುವಂತೆ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ದೆಹಲಿ ಸರ್ಕಾರದ ಆರೋಪದ ಬಗ್ಗೆ ಕರ್ನಲ್‌ನಲ್ಲಿ ಪ್ರತಿಕ್ರಿಯಿಸಿದ ಸೈನಿ, 'ಅರವಿಂದ ಕೇಜ್ರಿವಾಲ್‌ ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹಿಂದೆಯೂ, ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಅವರು ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾರೆ' ಎಂದು ದೂರಿದ್ದಾರೆ.

'ಒಪ್ಪಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ದೆಹಲಿಗೆ ಬಿಡುಗಡೆ ಮಾಡುತ್ತಿದ್ದೇವೆ' ಎಂದೂ ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮೊರೆ ಹೋದ ದೆಹಲಿ
ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿದೆ. ಬಿಸಿಗಾಳಿಯ ಪರಿಣಾಮ ನೀರಿನ ಬೇಡಿಕೆ ಗಣನೀಯವಾಗಿ ಏರಿದೆ.  ಹೀಗಾಗಿ ಒಂದು ತಿಂಗಳವರೆಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಪಕ್ಕದ ಹರಿಯಾಣಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕೇಂದ್ರಕ್ಕೆ ಪತ್ರ
ದೆಹಲಿಯ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಉತ್ತರ ಪ್ರದೇಶ ಅಥವಾ ಹರಿಯಾಣದಿಂದ ನೀರನ್ನು ಬಿಡುಗಡೆ ಮಾಡಿಸುವಂತೆ ಕೋರಿ ದೆಹಲಿಯ ಜಲ ಸಚಿವೆ ಆತಿಶಿ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ಪತ್ರ ಬರೆದಿದ್ದಾರೆ.

ಹರಿಯಾಣವು ಯಮುನಾ ನದಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಇದರಿಂದಾಗಿ ಕೆಲ ದಿನಗಳಿಂದ ವಜೀರಾಬಾದ್‌ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT