ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾನವಾಪಿ: ಮಸೀದಿ ಸಮಿತಿ ಮೇಲ್ಮನವಿ– ವಾದ ಆಲಿಸಿದ ಹೈಕೋರ್ಟ್

Published 6 ಫೆಬ್ರುವರಿ 2024, 15:42 IST
Last Updated 6 ಫೆಬ್ರುವರಿ 2024, 15:42 IST
ಅಕ್ಷರ ಗಾತ್ರ

ಪ್ರಯಾಗ್‌ರಾಜ್: ಗ್ಯಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ನೀಡಿದ್ದ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್‌ ಹೈಕೋರ್ಟ್‌ ಮಂಗಳವಾರ ಆರಂಭಿಸಿತು.

ಹಿಂದೂ ಮತ್ತು ಮುಸ್ಲಿಂ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ರೋಹಿತ್‌ ರಂಜನ್‌ ಅಗರವಾಲ್‌ ಅವರು ವಿಚಾರಣೆ ಬುಧವಾರವೂ ಮುಂದುವರಿಯಲಿದೆ ಎಂದರು. 

ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯ ಜನವರಿ 31 ರಂದು ಆದೇಶ ಹೊರಡಿಸಿತ್ತು. ಮಸೀದಿಯ ನಿರ್ವಹಣೆ ನೋಡಿಕೊಳ್ಳುತ್ತಿರುವ ಅಂಜುಮಾನ್‌ ಇಂತೆಜಾಮಿಯಾ ಸಮಿತಿಯು ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ.

ಮಸೀದಿ ಸಮಿತಿ ಪರ ಹಾಜರಿದ್ದ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ಅವರು, ‘ಅರ್ಜಿಯಲ್ಲಿ ಕೋರಿದ್ದ ಅಂತಿಮ ಪರಿಹಾರವನ್ನು  ಆರಂಭದಲ್ಲೇ ಕೊಟ್ಟಿದ್ದಾರೆ. ಆದ್ದರಿಂದ ಈ ಆದೇಶವನ್ನು ಒಪ್ಪಲಾಗದು’ ಎಂದು ವಾದಿಸಿದರು.

ಜಿಲ್ಲಾ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರೊಬ್ಬರು ನಿವೃತ್ತಿಯಾಗುವ ದಿನದಂದೇ, ‘ತರಾತುರಿಯಲ್ಲಿ’ ಆದೇಶ ಹೊರಡಿಸಿದೆ ಎಂದು ಪೀಠಕ್ಕೆ ತಿಳಿಸಿದರು. ವಾರಾಣಸಿ ಜಿಲ್ಲಾ ನ್ಯಾಯಾಧೀಶ ಅಜಯ್‌ ಕೃಷ್ಣ ವಿಶ್ವೇಶ ಅವರು ಜ.31 ರಂದು ಸೇವೆಯಿಂದ ನಿವೃತ್ತಿಯಾಗಿದ್ದರು. 

ಹಿಂದೂ ಪರ ವಕೀಲರಾದ ವಿಷ್ಣು ಶಂಕರ್ ಜೈನ್‌ ಅವರು, ‘ಆ ಸ್ಥಳದಲ್ಲಿ ಹಿಂದಿನಿಂದಲೂ ಪೂಜೆ ನಡೆಸಲಾಗುತ್ತಿತ್ತು. 1993 ರಲ್ಲಿ ಪೂಜೆ ನಿಲ್ಲಿಸಲಾಗಿತ್ತು. ಈಗ ಪೂಜೆಗೆ ಅವಕಾಶ ನೀಡಿರುವುರಿಂದ ಅವರಿಗೆ (ಮುಸ್ಲಿಮರಿಗೆ) ಯಾವುದೇ ತೊಂದರೆ ಉಂಟಾಗಿಲ್ಲ’ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT