ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ಝಳದಿಂದ ತತ್ತರಿಸಿದ್ದ ದೆಹಲಿಯಲ್ಲಿ ಭಾರಿ ಮಳೆ; ಮತ್ತೆ ಉಕ್ಕುವಳೇ ಯಮುನೆ?

Published 29 ಜೂನ್ 2024, 10:46 IST
Last Updated 29 ಜೂನ್ 2024, 10:46 IST
ಅಕ್ಷರ ಗಾತ್ರ

ನವದೆಹಲಿ: ಮೊನ್ನೆಯವರೆಗೂ ಬಿಸಿಲಿನ ಝಳ, ಶಾಖಾಘಾತದ ಜೊತೆಜೊತೆಗೆ ನೀರಿನ ಸಮಸ್ಯೆಯಿಂದ ಪರಿತಪಿಸುತ್ತಿದ್ದ ದೆಹಲಿ ಜನರು ಇದೀಗ ಭಾರಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೇ 13ರಿಂದ ಸತತ 40 ದಿನಗಳ ಕಾಲ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ಬಿಸಿ ಅನುಭವಿಸಿದ್ದ ರಾಷ್ಟ್ರ ರಾಜಧಾನಿಯಲ್ಲಿ ಕಳೆದ 88 ವರ್ಷಗಳಲ್ಲೇ ಅಧಿಕ ಎನ್ನುವಷ್ಟು ಮಳೆ ಜುಲೈ 27ರಂದು (ಗುರುವಾರ) ಒಂದೇ ದಿನ ಸುರಿದಿದೆ.

ದೆಹಲಿಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಂತೆ 7.4 ಸೆಂ.ಮೀ. ಮಳೆಯಾಗಬೇಕು. ಆದರೆ ಗುರುವಾರ 24 ಗಂಟೆಗಳ ಅವಧಿಯಲ್ಲಿ ಸರಾಸರಿಗಿಂತ ಮೂರು ಪಟ್ಟು ಮಳೆ ಬಿದ್ದಿದೆ. ಆ ದಿನ ಬೆಳಿಗ್ಗೆ  8.30ರಿಂದ ಮರುದಿನ ಬೆಳಿಗ್ಗೆ 8.30ರ ವರೆಗಿನ 24 ಗಂಟೆ ಅವಧಿಯಲ್ಲಿ ಬರೋಬ್ಬರಿ 22.8 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 1936ರ ಬಳಿಕ ಜೂನ್‌ ತಿಂಗಳಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ.

ಇದರ ಪರಿಣಾಮವಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳು ಮಾಯವಾದಂತೆ ಭಾಸವಾಗುತ್ತಿದೆ. 'ರಾಷ್ಟ್ರ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಹರಿಯಾಣವು ದೆಹಲಿ ಪಾಲಿನ ನೀರನ್ನು ಬಿಡುವವರೆಗೂ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ' ಎಂದು ನಿರಶನ ಕೈಗೊಂಡಿದ್ದ ಸಚಿವೆ ಆತಿಶಿ ಅವರ ನಿವಾಸದ ಸುತ್ತಲೂ ನೀರು ಆವರಿಸಿದೆ. ಸಂಸದರಾದ ಶಶಿ ತರೂರ್‌ ಮತ್ತು ಮನೀಷ್‌ ತಿವಾರಿ ಅವರ ಮನೆಗಳಿಗೂ ನೀರು ನುಗ್ಗಿದೆ.

ಉಕ್ಕಿ ಹರಿಯುವಳೇ ಯಮುನೆ?
ಮುಂಗಾರು ದೆಹಲಿಯನ್ನು ಪ್ರವೇಶಿಸಿದೆ ಎಂದಿರುವ ಹವಾಮಾನ ಇಲಾಖೆ, ಮುಂದಿನ ಎರಡು ದಿನ ಭಾರೀ ಮಳೆ ಸುರಿಯಲಿದೆ ಎಂಬ ಮುನ್ಸೂಚನೆಯನ್ನೂ ನೀಡಿದೆ.

ಶುಕ್ರವಾರ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಹಲವು ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ, ಜನರು ಸಂಕಷ್ಟಪಡುವಂತಾಯಿತು. ವಿಮಾನ ನಿಲ್ದಾಣದ ಟರ್ಮಿನಲ್‌–1ರ ಚಾವಣಿ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನಗರದಾದ್ಯಂತ ಮಳೆ ಸಂಬಂಧಿತ ಕಾರಣಗಳಿಂದಾಗಿ ಒಟ್ಟು ಐದು ಮಂದಿ ಸಾವಿಗೀಡಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವರ್ಷದ ಜುಲೈನಲ್ಲೂ ಇಂಥದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ತಿಂಗಳ ಆರಂಭದಲ್ಲೇ ಸುರಿದ ಮಹಾ ಮಳೆಯಿಂದಾಗಿ, ಯಮುನಾ ನದಿ ಸೇರಿದಂತೆ ಉತ್ತರ ಭಾರತದಾದ್ಯಂತ ಹಲವು ನದಿಗಳು ಉಕ್ಕಿ ಹರಿದಿದ್ದವು.

2023ರ ಜುಲೈ 13ರಂದು ಯಮುನಾ ನದಿ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ (208.66 ಮೀಟರ್‌ಗೆ) ತಲುಪಿತ್ತು. ಅದುವರೆಗೆ, 1978ರಲ್ಲಿ 207.49 ಮೀಟರ್‌ಗೆ ಏರಿದ್ದೇ ದಾಖಲೆಯಾಗಿತ್ತು.

ಯಮುನಾ ನದಿ ಸತತವಾಗಿ ಒಂದು ವಾರ 200 ಮೀಟರ್‌ಗಿಂತಲೂ ಅಧಿಕ ಮಟ್ಟದಲ್ಲೇ ಹರಿದ ಪರಿಣಾಮ, ರಾಷ್ಟ್ರಪತಿಭವನದ ಅಂಗಳಕ್ಕೂ ನೀರು ನುಗ್ಗಿತ್ತು. ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು.

ಈ ವರ್ಷ ಮತ್ತೆ ಅಂಥದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಶುಕ್ರವಾರ, ಸುಪ್ರೀಂ ಕೋರ್ಟ್‌ ಆವರಣಕ್ಕೂ ನೀರು ನುಗ್ಗಿದೆ.

ಸರಿಯಾಗಿ ಒಂದು ವಾರದ ಹಿಂದೆ, 'ಹರಿಯಾಣದ ಹತ್ನಿಕುಂಡ್‌ ಅಣೆಕಟ್ಟೆಯ ಎಲ್ಲ ಬಾಗಿಲುಗಳನ್ನು ಹಾಕಿದ್ದರಿಂದಲೇ ದೆಹಲಿಗೆ ಜಲಕ್ಷಾಮ ಬಂದೊದಗಿದೆ' ಎಂದು ಸರ್ಕಾರ ಕಿಡಿಕಾರಿತ್ತು. ಇದೀಗ, ಸತತ ಮಳೆಯಿಂದಾಗಿ ಯಮುನಾ ನೀರಿನ ಮಟ್ಟ ಹೆಚ್ಚಾಗಿದೆ.

ಭಾರಿ ಮಳೆ ಹಿನ್ನಲೆಯಲ್ಲಿ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿರುವ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಹಾಗೂ ಸಚಿವರು, ಹತ್ನಿಕುಂಡ್‌ ಅಣೆಕಟ್ಟೆಯ ಹೊರ ಹರಿವಿನ ಮೇಲೆ ನಿಗಾ ಇಡುವಂತೆ ಹಾಗೂ ಈ ವಿಚಾರವಾಗಿ ಹರಿಯಾಣ, ಹಿಮಾಚಲ ಪ್ರದೇಶದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವಂತೆ ನಿರ್ದೇಶನ ನೀಡಿದ್ದಾರೆ.

ಮಳೆ ಹೀಗೆಯೇ ಮುಂದುವರಿದರೆ, ಯಮುನಾ ನದಿ ಮತ್ತೆ ಉಕ್ಕಿ ಹರಿಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT