ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಸ್ಪರ ಕಚ್ಚಾಡಬೇಡಿ, ತಳಮಟ್ಟದಿಂದ ನಾಯಕತ್ವ ಬೆಳೆಸಿ: ಕಾರ್ಯಕರ್ತರಿಗೆ ಖರ್ಗೆ ಕಿವಿಮಾತು

‘ನಾಯಕತ್ವದ ಬೆಳವಣಿಗೆಯ ಮಿಷನ್’ ಕಾರ್ಯಾಗಾರ
Published 5 ಜುಲೈ 2023, 14:28 IST
Last Updated 5 ಜುಲೈ 2023, 14:28 IST
ಅಕ್ಷರ ಗಾತ್ರ

ನವದೆಹಲಿ: ‘2019ರ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪಕ್ಷದ ಕೆಲವು ಸಹೋದ್ಯೋಗಿಗಳೇ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆದರೆ, ಪಕ್ಷ ಗೆಲ್ಲಲೇಬೇಕೆಂದು ನಾನು ಬಯಸಿದ್ದರಿಂದ ನನಗೆ ವಿರೋಧವಿದ್ದ ಎಲ್ಲರಿಗೂ ಈಚೆಗೆ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ವಿಭಾಗದ ‘ನಾಯಕತ್ವದ ಬೆಳವಣಿಗೆ ಮಿಷನ್’ ಕುರಿತ ಪಕ್ಷದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಉದಯಪುರ ಚಿಂತನ ಶಿಬಿರದಲ್ಲಿ ‘ನಾಯಕತ್ವ ಬೆಳವಣಿಗೆ ಮಿಷನ್’ ಘೋಷಿಸಲಾಗಿತ್ತು. ಇದಕ್ಕೆ ತಮ್ಮೆಲ್ಲರ ಸಹಕಾರ ಮತ್ತು ಬೆಂಬಲಬೇಕು. ಕಾರ್ಯಕರ್ತರು ಪರಸ್ಪರ ಕಚ್ಚಾಡದೆ, ಬೇರುಮಟ್ಟದಿಂದ ಸ್ಥಳೀಯವಾಗಿ ನಾಯಕತ್ವ ಬೆಳೆಸಲು ನೆರವಾಗಬೇಕು ಎಂದು ಕಿವಿ ಮಾತು ಹೇಳಿದರು.

‘ಸ್ಥಳೀಯ ನಾಯಕತ್ವದೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ಹೊಂದಾಣಿಕೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ತಮ್ಮ ಸಹೋದ್ಯೋಗಿಯನ್ನು ಸೋಲಿಸಿದರೆ ತಮಗೇ ಅವಕಾಶ ಸಿಗಬಹುದೆಂದು ಯಾವತ್ತೂ ಕೆಲಸ ಮಾಡಬಾರದು. ನನ್ನದೇ ನಿದರ್ಶನ ಗಮನಿಸಿದರೆ ಅವಕಾಶವೆನ್ನುವುದು ಎಲ್ಲರಿಗೂ ಸಿಗುತ್ತದೆ. ಅವಕಾಶಕ್ಕಾಗಿ ಕಾಯುವುದು ಯಾವಾಗಲೂ ಒಳ್ಳೆಯದು’ ಎಂದು ಹೇಳಿದರು.

‘ಸಂಘಟನೆ ಬಲಪಡಿಸಲು ನಾವು ನಿರಂತರ ಶ್ರಮಿಸುತ್ತಿದ್ದೇವೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಬೇಕು. ನೀವು ಸದೃಢವಾಗದಿದ್ದರೆ, ನಿಮ್ಮ ಸ್ವಂತ ಕಾಲಿನ ಮೇಲೆ ನಿಲ್ಲದಿದ್ದರೆ ಅಥವಾ ನಿಮ್ಮಲ್ಲಿ ಆತ್ಮಗೌರವ ಬೆಳೆಸಿಕೊಳ್ಳದಿದ್ದರೆ, ನೀವು ಮುಂದುವರಿಯಲು ಸಾಧ್ಯವಿಲ್ಲ’ ಎಂದು ಅವರು ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT