ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾರ್ಖಂಡ್: ವಿಶ್ವಾಸ ಮತ ಗೆದ್ದ ಹೇಮಂತ್ ಸೊರೇನ್‌ ಸರ್ಕಾರ

Published 8 ಜುಲೈ 2024, 7:39 IST
Last Updated 8 ಜುಲೈ 2024, 7:39 IST
ಅಕ್ಷರ ಗಾತ್ರ

ರಾಂಚಿ: ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ನೇತೃತ್ವದ ಸರ್ಕಾರವು ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿತು.

ನಾಮನಿರ್ದೇಶಿತ ಸದಸ್ಯ ಗಲೆನ್ ಜೋಸೆಫ್‌ ಗಾಲೆಸ್ಟೇನ್ ಸೇರಿದಂತೆ 45 ಶಾಸಕರು ಜೆಎಂಎಂ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಿದರು.

ಸದಸ್ಯರ ತಲೆ ಎಣಿಕೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಬಿಜೆಪಿ ಮತ್ತು ಎಜೆಎಸ್‌ಯು ಶಾಸಕರು ಸಭಾತ್ಯಾಗ ಮಾಡಿದರು. 

ವಿಶ್ವಾಸಮತ ಗೆದ್ದ ನಂತರ ಮಾತನಾಡಿದ ಸೊರೇನ್‌, ‘ಆಡಳಿತಾರೂಢ ಮೈತ್ರಿ ಸರ್ಕಾರದ ಒಗ್ಗಟ್ಟು ಮತ್ತು ಬಲ ಪ್ರದರ್ಶನಕ್ಕೆ ಮತ್ತೊಮ್ಮೆ ಎಲ್ಲರೂ ಸಾಕ್ಷಿಯಾಗಿದ್ದಾರೆ. ಸ್ಪೀಕರ್‌ ಮತ್ತು ಮಿತ್ರ ಪಕ್ಷಗಳ ಶಾಸಕರಿಗೆ ಧನ್ಯವಾದಗಳು’ ಎಂದು ಹೇಳಿದರು.

‘ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಯಾವುದೇ ಕಾರ್ಯಸೂಚಿಯನ್ನು  ಹೊಂದಿಲ್ಲ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಯ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಯಿಂದ ಬಿಜೆಪಿಯು ಪ್ರಬಲ ವಿರೋಧವನ್ನು ಎದುರಿಸಲಿದೆ’ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಅಮರ್‌ ಬಾವುರಿ ಮಾತನಾಡಿ, ‘ಕಳೆದ ಐದು ವರ್ಷಗಳಲ್ಲಿ ಜೆಎಂಎಂ–ಕಾಂಗ್ರೆಸ್‌–ಆರ್‌ಜೆಡಿ ಮೈತ್ರಿ ಸರ್ಕಾರವು ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ’ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ, ಶಾಸಕ ಭಾನು ಪ್ರತಾಪ್‌ ಸಾಹಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಕೋರಿದರು. ಆದರೆ, ಸ್ಪೀಕರ್‌ ಅವರ ಮನವಿಯನ್ನು ತಿರಸ್ಕರಿಸಿದರು.

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ 75 ಶಾಸಕರು ವಿಧಾನಸಭೆಯಲ್ಲಿ ಹಾಜರಿದ್ದರು. ಪಕ್ಷೇತರ ಶಾಸಕ ಸರಯೂ ರಾಯ್ ಅವರು ಮತದಾನದಿಂದ ದೂರ ಉಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT