ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಹೇಮಂತ್‌ ಸೊರೇನ್‌ ಪ್ರಮಾಣವಚನ

Published 4 ಜುಲೈ 2024, 11:46 IST
Last Updated 4 ಜುಲೈ 2024, 11:46 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್‌ ಮುಕ್ತಿ ಮೋರ್ಚಾದ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್‌ ಸೊರೇನ್‌ ಅವರು ಜಾರ್ಖಂಡ್‌ನ 13ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅವರು ಸೊರೇನ್‌ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಸೊರೇನ್‌ ಅವರ ತಂದೆ, ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್‌, ತಾಯಿ ರೂಪಿ ಸೊರೇನ್‌, ಪತ್ನಿ ಕಲ್ಪನಾ ಸೊರೇನ್‌, ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌, ಪಕ್ಷ ಮತ್ತು ಮೈತ್ರಿಕೂಟದ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್‌ ಸೊರೇನ್‌ ಅವರು ಜನವರಿ 31ರಂದು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದರು. ಅದಕ್ಕೂ ಕೆಲ ಕ್ಷಣ ಮುನ್ನ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ಅವರು ಜೂನ್‌ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ‘ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ನಾನು ಸಹ ನನ್ನ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸುತ್ತೇನೆ’ ಎಂದು ತಿಳಿಸಿದರು. 

ವಿಡಿಯೊ ಸಂದೇಶ:

ರಾಜ್ಯದ ಜನರಿಗೆ ವಿಡಿಯೊ ಸಂದೇಶ ಕಳುಹಿಸಿರುವ ನೂತನ ಮುಖ್ಯಮಂತ್ರಿ, ‘ವಿರೋಧ ಪಕ್ಷಗಳ ದುಷ್ಟ ಯೋಜನೆ ಮತ್ತು ಪಿತೂರಿಯಿಂದಾಗಿ ನಾನು ಐದು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ಇನ್ನೂ ದೀರ್ಘಕಾಲ ನನ್ನನ್ನು ಜೈಲಿನಲ್ಲಿರಿಸಲು ಅವರು ಬಯಸಿದ್ದರು. ಆದರೆ ನಾನೂ ಬಗ್ಗಲಿಲ್ಲ, ಕಾನೂನು ಹೋರಾಟ ಮಾಡಿದೆ. ನೀವೂ ನನ್ನನ್ನು ಬೆಂಬಲಿಸಿದಿರಿ. ಕೊನೆಗೆ ನನಗೆ ನ್ಯಾಯ ದೊರೆಯಿತು, ಬಿಡುಗಡೆ ಆಗಿದ್ದೇನೆ’ ಎಂದು ಹೇಳಿದ್ದಾರೆ.

‘2019ರಲ್ಲಿ ಜನ ಸೇವೆ ಮಾಡಲು ನನಗೆ ಅವಕಾಶ ದೊರೆಯಿತು. ಆದರೆ ಬುಡಕಟ್ಟು ಸಮುದಾಯದ ಯುವಕ ಇಷ್ಟು ಎತ್ತರಕ್ಕೆ ತಲುಪಿದ್ದಾನೆ ಎಂದು ನನ್ನ ವಿರುದ್ಧ ಕೆಲವರು ಪಿತೂರಿ ಮಾಡಿದ್ದಾರೆ. ಅಂತಿಮವಾಗಿ ಸತ್ಯ ಮೇಲುಗೈ ಸಾಧಿಸಿದೆ. ನಾನು ರಾಜ್ಯದ ಜನರಿಗೆ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ತ್ವರಿತಗೊಳಿಸಲಾಗುವುದು ಎಂದು ಜೆಎಂಎಂ ಶಾಸಕಿಯೂ ಆಗಿರುವ ಹೇಮಂತ್‌ ಅವರ ಪತ್ನಿ, ಕಲ್ಪನಾ ಸೊರೇನ್‌ ಹೇಳಿದರು.

ಹೇಮಂತ್‌ ಸೊರೇನ್‌ ನೇತೃತ್ವದ ಸರ್ಕಾರದ ಸಂಪುಟದ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಈ ಕುರಿತು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಜಾರ್ಖಂಡ್‌ನ ಕಾಂಗ್ರೆಸ್‌ ಉಸ್ತುವಾರಿ ಗುಲಾಮ್‌ ಅಹ್ಮದ್‌ ಮಿರ್‌ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT