ಭೋಪಾಲ್ : ‘ಹೋಶಂಗಬಾದ್ ನಗರವನ್ನು ನರ್ಮದಾಪುರಂ ಎಂದು ಮರುನಾಮಕರಣ ಮಾಡಲಾಗುವುದು. ಈ ಕುರಿತಾದ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ಹೋಶಂಗಬಾದ್‌ನಲ್ಲಿ ಶುಕ್ರವಾರ ಸಂಜೆ ನಡೆದ ನರ್ಮದಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಘೋಷಿಸಿದರು.
ಈ ವೇಳೆ ಅವರು, ಜನರಲ್ಲಿ ಹೆಸರು ಬದಲಾಯಿಸುವ ಬಗ್ಗೆ ಅಭಿಪ್ರಾಯ ಕೇಳಿದರು. ಆಗ ಜನರು, ಒಮ್ಮತವಾಗಿ ಒಪ್ಪಿಗೆ ಸೂಚಿಸಿದರು. ನಗರದ ಹೆಸರನ್ನು ಏನೆಂದು ಮರುನಾಮಕರಣ ಮಾಡಬೇಕು ಎಂದು ಚೌಹಾಣ್ ಅವರು ಕೇಳಿದಾಗ ಜನರು ‘ನರ್ಮದಾಪುರಂ’ ಎಂದು ಉತ್ತರಿಸಿದರು.
‘ನಾನು ಈ ಕೂಡಲೇ ಮರುನಾಮಕರಣದ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸುತ್ತೇನೆ. ನರ್ಮದಾ ನದಿ ದಂಡೆಯಲ್ಲಿ ಸಿಮೆಂಟ್–ಕಾಂಕ್ರಿಟ್ ಕಟ್ಟಡಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ. ಅಲ್ಲದೆ ನದಿಯ ಬಳಿಯಿರುವ ನಗರಗಳಲ್ಲಿ ಕೊಳಚೆ ನೀರಿನ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಭುಪೇಂದ್ರ ಗುಪ್ತಾ, ‘ಮಧ್ಯಪ್ರದೇಶ ಸರ್ಕಾರವು ಮರುನಾಮಕರಣದ ವಿಷಯವನ್ನು ಪ್ರಸ್ತಾಪಿಸುವ ಮೂಲಕಹಣದುಬ್ಬರ ಮತ್ತು ಹೆಚ್ಚುತ್ತಿರುವ ಇಂಧನದ ಬೆಲೆಗಳಂತಹ ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ’ ಎಂದು ದೂರಿದರು.
‘ಬಿಜೆಪಿಯು ಮೊಘಲರಿಗೆ ಸಂಬಂಧಿಸಿದ ಹೆಸರುಗಳನ್ನು ಮಾತ್ರ ಬದಲಾಯಿಸುತ್ತಿದೆ. ಬ್ರಿಟಿಷ್ ಆಡಳಿತದ ಹೆಸರುಗಳನ್ನು ಏಕೆ ಬದಲಾಯಿಸುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.