ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಆದೇಶದ ಬೆನ್ನಲ್ಲೇ ವಿವಾದಿತ ಜ್ಞಾನವಾಪಿಯಲ್ಲಿ ಬಿಗಿಭದ್ರತೆಯ ನಡುವೆ ಪೂಜೆ

Published 1 ಫೆಬ್ರುವರಿ 2024, 7:47 IST
Last Updated 1 ಫೆಬ್ರುವರಿ 2024, 7:47 IST
ಅಕ್ಷರ ಗಾತ್ರ

ವಾರಾಣಸಿ: ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಬುಧವಾರ (ಜನವರಿ 31) ರಾತ್ರಿ ಪೂಜೆ ಸಲ್ಲಿಸಲಾಯಿತು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರ ಪಾಂಡೆ ತಿಳಿಸಿದ್ದಾರೆ.

ಕಾನೂನು ಹೋರಾಟದ ಮಹತ್ವದ ಬೆಳವಣಿಗೆಯಲ್ಲಿ ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯ ಬುಧವಾರ (ಜನವರಿ 31) ತೀರ್ಪು ನೀಡಿತ್ತು.

ಬುಧವಾರ ರಾತ್ರಿ 10.30 ಗಂಟೆ ಸಮಯಕ್ಕೆ, ಸುಮಾರು 31 ವರ್ಷಗಳ ನಂತರ ವ್ಯಾಸ್‌ ಅವರ ನೆಲಮಹಡಿಯನ್ನು ಪ್ರಾರ್ಥನೆಗಾಗಿ ತೆರೆಯಲಾಯಿತು. ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತವು ಪೂಜೆ ಸಲ್ಲಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಅತ್ಯಂತ ತ್ವರಿತವಾಗಿ ಮಾಡಿದೆ ಎಂದು ಪಾಂಡೆ ಹೇಳಿದ್ದಾರೆ.

ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಎಸ್‌. ರಾಜಲಿಂಗಂ ತಿಳಿಸಿದ್ದಾರೆ.

‘ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಕೋರ್ಟ್‌ ಅವಕಾಶ ನೀಡಿದೆ. ಇದಕ್ಕಾಗಿ ವಾರದಲ್ಲಿ ಅಗತ್ಯ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನ್ಯಾಯಾಲಯ ಆದೇಶಿಸಿತ್ತು.

ನೆಲಮಹಡಿ ಸ್ವಚ್ಛಗೊಳಿಸಿದ ನಂತರ, ಲಕ್ಷ್ಮಿ ದೇವಿ ಹಾಗೂ ಗಣೇಶ ದೇವರುಗಳಿಗೆ ಆರತಿಯನ್ನು ಮಾಡಲಾಯಿತು ಎಂದು ಕೆಲವು ಸ್ಥಳೀಯರು ತಿಳಿಸಿದ್ದಾರೆ.

ಈ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌, ‘ನ್ಯಾಯಾಲಯದ ಆದೇಶವನ್ನು ಅನುಸರಿಸುವಾಗ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ವಾರಾಣಸಿ ಜಿಲ್ಲಾ ನ್ಯಾಯಾಲಯವು ಪೂಜೆಗೆ ವ್ಯವಸ್ಥೆ ಕಲ್ಪಿಸಲು ಏಳು ದಿನಗಳ ಅವಧಿಯನ್ನು ನಿಗದಿಪಡಿಸಿದೆ. ಆದರೆ, ನ್ಯಾಯಾಲಯದ ಆದೇಶಗಳ ಜಾರಿಯಲ್ಲಿ ಸರ್ಕಾರ ತೋರುತ್ತಿರುವ ಆತುರವು ಆ ಪ್ರಕರಣದಲ್ಲಿ ಪ್ರತಿ ವಾದಿಗೆ ಯಾವುದೇ ಕಾನೂನಿನ ಆಶ್ರಯ ಸಿಗಬಾರದು ಎಂಬುದಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT