ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟ್ಯಾನ್‌ ಸ್ವಾಮಿ: ಮಾನವೀಯ ಚೇತನ ಅಮಾನವೀಯತೆಗೆ ಬಲಿ

ಫಾಲೋ ಮಾಡಿ
Comments

ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದ ಸ್ಟ್ಯಾನ್‌ ಸ್ವಾಮಿ ಅವರು ಜೆಸ್ವಿತ್ ಸಂಸ್ಥೆಯ ಗುರುವಾಗಿ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದ ನಾಮ್ ಕುಮ್ ಎಂಬಲ್ಲಿ ಜೆಸ್ವಿತ್ ಬಡಕುಟೀರದಲ್ಲಿ ವಾಸಿಸುತ್ತ ಆದಿವಾಸಿಗಳ ಹಕ್ಕುಸ್ಥಾಪನೆಯ ಕೆಲಸದಲ್ಲಿ ನಿರತರಾಗಿದ್ದರು.

ನಮ್ಮ ದೇಶದ ಜನಸಂಖ್ಯೆಯಲ್ಲಿದಂಡಕಾರಣ್ಯದ ಆದಿವಾಸಿಗಳ ‍ಪ್ರಮಾಣ ಶೇ 8.9ರಷ್ಟಿದ್ದು, ಪಶ್ಚಿಮಬಂಗಾಳದಿಂದ ಹಿಡಿದು ಗುಜರಾತ್‌ವರೆಗೆ ವ್ಯಾಪಿಸಿದ್ದಾರೆ. ತಳಿಶಾಸ್ತ್ರದ ವಿಜ್ಞಾನಿಗಳ ಪ್ರಕಾರ ಇವರು ನಮ್ಮ ದೇಶದ ಮೂಲನಿವಾಸಿಗಳು.

ಯಾವಾಗ ಅರಣ್ಯಗಳನ್ನು ಜನಜೀವನದಿಂದ ಮುಕ್ತಗೊಳಿಸಬೇಕು ಎಂಬ ಆದೇಶ ಹೊರಟಿತೋ ಅಂದಿನಿಂದ ಈ ಆದಿವಾಸಿಗಳಿಗೆ ತೊಂದರೆ ಶುರುವಾಯಿತು. ಕಾಡನ್ನೇ ತಾಯಿಯಂತೆ ಪೂಜಿಸುತ್ತಿದ್ದ ಇವರಿಗೆ ಕಾಡಿನ ಹಕ್ಕನ್ನು ನಿರಾಕರಿಸಲಾಯಿತು; ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನಗಳೂ ನಡೆದವು. ಇಂಥ ದಬ್ಬಾಳಿಕೆ ವಿರುದ್ಧ ಆದಿವಾಸಿಗಳು ಸೆಟೆದು ನಿಂತು ತಮ್ಮ ಹಕ್ಕುಸ್ಥಾಪನೆಗಾಗಿ ಹೋರಾಡುತ್ತಿದ್ದಾರೆ ಎಂದು ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ವರದಿ ದಾಖಲಿಸಿದೆ.

ಈ ದಟ್ಟ ಅರಣ್ಯಗಳು ನೈಸರ್ಗಿಕ ಸಂಪತ್ತಿನ ನಿಧಿಯಾಗಿವೆ. ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಖನಿಜದ ಗಣಿಗಳನ್ನು ದೀರ್ಘಾವಧಿಗೆ ಗುತ್ತಿಗೆ ಪಡೆಯಲು ಹೊಂಚು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ನದಿಗಳೂ ಕಣಿವೆಗಳೂ ಭಾರಿ ಗಾತ್ರದ ಅಣೆಕಟ್ಟುಗಳನ್ನು ಕಟ್ಟಲು ಸೂಕ್ತವಾಗಿದ್ದು ವಿದ್ಯುತ್‌ ಉತ್ಪಾದನೆಗೆ ಸಹಕಾರಿ. ನಾಗರಿಕ ಸಮುದಾಯಕ್ಕೆ ವರದಾನವಾಗಲಿರುವ ಈ ಅಭಿವೃದ್ಧಿ ಕಾರ್ಯಗಳಿಂದ ನಿಜವಾಗಿ ಸಂತ್ರಸ್ತರಾಗಲಿರುವವರು ಆದಿವಾಸಿಗಳು. ಅವರೆಲ್ಲರೂ ಇಂದು ಸಂಘಟಿತರಾಗಿ ಪ್ರತಿಭಟನೆಗೆ ತೊಡಗಿದ್ದಾರೆ. ಆದರೆ ಸರ್ಕಾರವು ಈ ನಡವಳಿಕೆಯನ್ನು ರಾಜದ್ರೋಹ ಎಂದು ಪರಿಗಣಿಸಿದೆ.

ಕೆಲವರ್ಷಗಳ ಹಿಂದೆ ಆಡಳಿತಯಂತ್ರವು ಭೇದೋಪಾಯವಾಗಿ ಸಲ್ವಾಜುಡುಮ್ ಎಂಬ ಸಂಘಟನೆಯನ್ನು ಹೋರಾಟಗಾರರ ವಿರುದ್ಧ ಎತ್ತಿಕಟ್ಟಿ ಆದಿವಾಸಿಗಳು ಪರಸ್ಪರ ಹೊಡೆದಾಡುವಂತೆ ಮಾಡಿತು. ಹೋರಾಟಗಾರರನ್ನು ಮಾವೋವಾದಿಗಳು ಅಥವಾ ಅವರಿಗೆ ಸಹಾಯ ಮಾಡಿದವರು ಎಂಬ ಆರೋಪದ ಮೇಲೆ ಅಕ್ರಮ ಚಟುವಟಿಕೆ ತಡೆ ಕಾಯ್ದೆ ಅಡಿ ಬಂಧಿಸಿ ಸೆರೆಗೆ ತಳ್ಳಲಾಯಿತು.

ಸ್ಟ್ಯಾನ್ ಸ್ವಾಮಿಯವರು ಅಮಾಯಕ ಅವಿದ್ಯಾವಂತ ಆದಿವಾಸಿಗಳು ಹೀಗೆ ಶೋಷಣೆಗೊಳಗಾಗುವುದನ್ನು ಕಂಡು ನೊಂದರು. ಸೆರೆಮನೆಗೆ ಭೇಟಿ ನೀಡಿ ಮುಗ್ದ ಆದಿವಾಸಿಗಳಿಗೆ ಸಾಂತ್ವನ ಹೇಳಿದರು. ಪೊಲೀಸ್‌ ಅಧಿಕಾರಿಗಳ ನಿರಂಕುಶ ವರ್ತನೆ ಹಾಗೂ ಬಂಧಿತರಾದ ಅಮಾಯಕ ಆದಿವಾಸಿಗಳ ಸ್ಥಿತಿಗತಿಗಳ ಕುರಿತುಮಾನವಹಕ್ಕುಗಳ ವಕೀಲೆ ಸುಧಾ ಭಾರದ್ವಾಜ್ ಅವರ ಸಹಯೋಗದಲ್ಲಿ ತಮ್ಮದೇ ವಾರಪತ್ರಿಕೆಯಲ್ಲಿ2018ರ ಏಪ್ರಿಲ್ 7ರಂದು ದೀರ್ಘ ಲೇಖನ ಬರೆದರು. ಜನಜಾಗೃತಿ ಮೂಡಿಸಿದ ಕಾರಣಕ್ಕಾಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾದರು.

ಈ ನಡುವೆ 2018ರ ಜನವರಿ ಒಂದರಂದು ಭೀಮಾ-ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಗಲಭೆಯೆಬ್ಬಿಸಿದರು. ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ಜನಾಭಿಪ್ರಾಯ ದಟ್ಟವಾಗುತ್ತಿತ್ತು. ಅದರ ಮುಂದಿನ ವರ್ಷ ನಡೆಯಲಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ವಿರುದ್ಧ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂದು ಭಾವಿಸಿದ ಬಿಜೆಪಿ, ತನ್ನ ವಿರುದ್ಧ ಮಾತನಾಡುವ ವಿಚಾರವಾದಿಗಳು, ಚಿಂತಕರು, ಮಾನವಹಕ್ಕು ಕಾರ್ಯಕರ್ತರು ಮುಂತಾದವರ ಮೇಲೆ ಕತ್ತಿ ಬೀಸತೊಡಗಿತು. ದೇಶದ ಎಲ್ಲೆಲ್ಲೋ ಇದ್ದ ವಿಚಾರವಾದಿಗಳನ್ನು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಿಲುಕಿಸಲಾಯಿತು.

83ರ ವಯೋವೃದ್ಧ ಸ್ಟ್ಯಾನ್ ಸ್ವಾಮಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ತನಿಖಾ ಸಂಸ್ಥೆಯು ಕಳೆದ ಅಕ್ಟೋಬರ್ ಎಂಟರಂದು ಅವರನ್ನು ಬಂಧಿಸಿ ಮುಂಬೈಗೆ ಕೊಂಡೊಯ್ಯಿತು. ಅವರು ಬಹಿಷ್ಕೃತ ಮಾವೊವಾದಿ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ ಎಂಬುದು ಪ್ರಮುಖ ಆರೋಪವಾಗಿತ್ತು.

ಸ್ಟ್ಯಾನ್‌ ಸ್ವಾಮಿಯವರಿಗೆ ಪಾರ್ಕಿನ್ಸನ್ ಕಾಯಿಲೆಯಿದೆ. ಅವರ ದೇಹಕ್ಕೆ ಆಗಾಗ್ಗೆ ರಕ್ತ ಮರುಪೂರಣ ಮಾಡಬೇಕಿತ್ತು, ಕೈ ನಡುಗುವ ಕಾರಣ ಅವರಿಗೆ ರುಜು ಹಾಕಲು ಸಹ ಆಗುತ್ತಿರಲಿಲ್ಲ, ಚಹಾ ಕುಡಿಯುವ ಕಪ್ ಹಿಡಿಯಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ, ದ್ರವಾಹಾರವನ್ನು ಸೇವಿಸಲು ಹೀರುಗೊಳವೆ ಬೇಕಾಗಿದೆ ಎಂದರೂ ನಿರಾಕರಿಸಲಾಯಿತು. ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾಗಲೂ ಅವರ ಕಾಲಿಗೆ ಬೇಡಿ ತೊಡಿಸಿ ಮಂಚಕ್ಕೆ ಬಿಗಿಯಲಾಗಿತ್ತು.

ಮಾನವತೆಯನ್ನು ಎತ್ತಿಹಿಡಿಯಲು ದುಡಿದ ಒಂದು ಮಹಾನ್ ಚೇತನ ಅಮಾನವೀಯತೆಗೆ ಬಲಿಯಾಯಿತು.

(ಲೇಖಕ: ಹವ್ಯಾಸಿ ಬರಹಗಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT