ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಲ್ಲಿ ವಾಯುಪಡೆಯ ಲಘು ಯುದ್ಧ ವಿಮಾನ ತೇಜಸ್‌ ಪತನ

‘ಭಾರತ ಶಕ್ತಿ’ ಪ್ರದರ್ಶನದ ವೇಳೆಯೇ ಘಟನೆ
Published 12 ಮಾರ್ಚ್ 2024, 9:46 IST
Last Updated 12 ಮಾರ್ಚ್ 2024, 9:46 IST
ಅಕ್ಷರ ಗಾತ್ರ

ಜೈಸಲ್ಮೇರ್‌/ ನವದೆಹಲಿ: ಭಾರತೀಯ ವಾಯುಪಡೆಯ ‘ತೇಜಸ್’ ಹಗುರ ಯುದ್ಧ ವಿಮಾನವೊಂದು (ಎಲ್‌ಸಿಎ) ತರಬೇತಿ ಹಾರಾಟದ ವೇಳೆ ಮಂಗಳವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ ಪೈಲಟ್‌ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತನಕ್ಕೆ ಕಾರಣವೇನು ಎಂಬುದನ್ನು ಪತ್ತೆಮಾಡಲು ತನಿಖೆ ಆರಂಭಿಸಲಾಗಿದೆ ಎಂದು ಸೇನೆ ತಿಳಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಭಾಗಿಯಾಗಿದ್ದ, ಸೇನೆಯ ಮೂರು ವಿಭಾಗಗಳ ಬೃಹತ್‌ ಕೌಶಲ ಪ್ರದರ್ಶನ ‘ಭಾರತ ಶಕ್ತಿ’ ನಡೆಯುತ್ತಿರುವ ಪೋಖರಣ್‌ನಿಂದ 100 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ದೇಶೀಯವಾಗಿ ನಿರ್ಮಿಸಲಾಗಿರುವ ತೇಜಸ್‌ ಯುದ್ಧ ವಿಮಾನಗಳೂ ಈ ಪ್ರದರ್ಶನದ ಭಾಗವಾಗಿವೆ ಎಂದು ವಾಯುಪಡೆ ಹೇಳಿದೆ. 

ಕಲ್ಲಾ ವಸತಿ ಪ್ರದೇಶದಲ್ಲಿಯ ಹಾಸ್ಟೆಲೊಂದರ ಮೇಲೆ ವಿಮಾನ ಪತನವಾಗಿದೆ. ಆ ವೇಳೆ ಹಾಸ್ಟೆಲ್‌ನಲ್ಲಿ ಯಾರೊಬ್ಬರೂ ಇರಲಿಲ್ಲ. ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ಕಾಣಿಸಿಕೊಂಡಿತು. ಘಟನೆಯಲ್ಲಿ ಯಾವ ಸ್ವತ್ತಿಗೂ ಹಾನಿಯಾಗಿಲ್ಲ ಎಂದು ಜೈಸಲ್ಮೇರ್‌ನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತೇಜಸ್‌ ಯುದ್ಧ ವಿಮಾನಗಳನ್ನು ಸೇನೆಗೆ ಸೇರಿಸಿ 23 ವರ್ಷಗಳು ಕಳೆದಿವೆ. ಇದೇ ಮೊದಲ ಬಾರಿಗೆ ಈ ಸರಣಿಯ ವಿಮಾನವೊಂದು ಅಪಘಾತಕ್ಕೀಡಾಗಿರುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ತ್ರಿಶಕ್ತಿಯ ಪ್ರದರ್ಶನ: ಮೋದಿ

ಪೋಖರಣ್‌: ಜೈಸಲ್ಮೇರ್‌ನಲ್ಲಿ ಯುದ್ಧ ವಿಮಾನ ಪತನವಾಗಿದ್ದರೆ ಅತ್ತ ಪೋಖರಣ್‌ನಲ್ಲಿ ನಡೆದ ‘ಭಾರತ ಶಕ್ತಿ’ ಸೇನಾ ಬೃಹತ್ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಅವರು ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ದೇಶ ಸ್ವಾವಲಂಬಿ ಆಗುತ್ತಿರುವ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಿದರು.

ದೇಶದ ತ್ರಿಶಕ್ತಿಯಾದ ‘ಆತ್ಮನಿರ್ಭರತೆ’ ‘ವಿಶ್ವಾಸ’ ಮತ್ತು ‘ಆತ್ಮಗೌರವ’ದ ಅನಾವರಣವು ಪೋಖರಣ್‌ನಲ್ಲಿ ಆಗುತ್ತಿದೆ. ‘ತೇಜಸ್‌’ ಹಗುರ ಯುದ್ಧ ಹೆಲಿಕಾಪ್ಟರ್‌ಗಳನ್ನು ನಮ್ಮ ಪೈಲಟ್‌ಗಳು ಈಗ ಬಳಸುತ್ತಿದ್ದಾರೆ’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.  50 ನಿಮಿಷಗಳು ನಡೆದ ಪ್ರದರ್ಶನದಲ್ಲಿ ದೇಶೀಯವಾಗಿ ನಿರ್ಮಾಣವಾಗಿರುವ ಯುದ್ಧ ಸಾಮಗ್ರಿಗಳ ಕೌಶಲ ಮತ್ತು ಸಾಮರ್ಥ್ಯವನ್ನು ಸೇನೆಯು ತೆರೆದಿಟ್ಟಿತು.

‘ತೇಜಸ್‌ ಎಲ್‌ಸಿಎ’ ಮತ್ತು ‘ಎಎಲ್‌ಎಚ್‌ ಎಂಕೆ–4’ ಯುದ್ಧವಿಮಾನಗಳ ಅಬ್ಬರ ಆಕಾಶದಲ್ಲಿ ಪ್ರತಿಧ್ವನಿಸಿದರೆ ಯುದ್ಧ ಟ್ಯಾಂಕ್‌ಗಳಾದ ‘ಅರ್ಜುನ್‌’ ‘ಕೆ–9 ವಜ್ರ’ ‘ಧನುಷ್‌’ ಮತ್ತು ‘ಶಾರಂಗ್‌’ಗಳು ತಮ್ಮ ಶಕ್ತಿ ಪ್ರದರ್ಶಿಸಿದವು. ಪಿನಾಕಾ ಉಪಗ್ರಹ ವ್ಯವಸ್ಥೆ ಡ್ರೋನ್‌ ವ್ಯವಸ್ಥೆಗಳ ಕೌಶಲ ನೋಡಿ ಜನ ಬೆರಗಾದರು.

‘ಅಗ್ನಿ 5’ ಪರೀಕ್ಷಾರ್ಥ ಪ್ರಯೋಗದ ಯಶಸ್ಸಿಗೆ ಶ್ಲಾಘನೆ

ನವದೆಹಲಿ: ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ–5 ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಸೋಮವಾರ ಯಶಸ್ವಿಯಾಗಿ ನಡೆಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

‘ಮಿಷನ್ ದಿವ್ಯಾಸ್ತ್ರ’ದ ಅಡಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಲವು ಗುರಿಗಳನ್ನು ಸ್ವತಂತ್ರವಾಗಿ ಭೇದಿಸಿ ಮತ್ತೆ ವಾಪಸ್ಸಾಗುವ ಕ್ಷಿಪಣಿ ವಾಹಕ ತಂತ್ರಜ್ಞಾನ (ಎಂಐಆರ್‌ವಿ) ಹೊಂದಿರುವ ಅಗ್ನಿ–5 ಕ್ಷಿಪಣಿಯ ಯಶಸ್ವೀ ಪ್ರಯೋಗ ನಡೆಸಿದ ಡಿಆರ್‌ಡಿಒ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಪ್ರಧಾನಿ ಮೋದಿ ತಮ್ಮ ‘ಎಕ್ಸ್‌’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಭಾರತವು ಅಗ್ನಿ–5 ಯಶಸ್ವೀ ಪ್ರಯೋಗದ ಮೂಲಕ ಎಂಐಆರ್‌ವಿ ತಂತ್ರಜ್ಞಾನ ಹೊಂದಿದ ಕೆಲವೇ ದೇಶಗಳ ಸಾಲಿಗೆ ಸೇರಿದೆ. ಇದರ ಅಸಾಧಾರಣ ಯಶಸ್ಸಿಗಾಗಿ ನಾನು ಡಿಆರ್‌ಡಿಒ ವಿಜ್ಞಾನಿಗಳನ್ನು ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ’ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT