ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ  ಹೃದಯಾಘಾತದಿಂದ ನಿಧನ

Published 21 ಫೆಬ್ರುವರಿ 2024, 6:13 IST
Last Updated 21 ಫೆಬ್ರುವರಿ 2024, 6:13 IST
ಅಕ್ಷರ ಗಾತ್ರ

ಮುಂಬೈ: ‘ಬಿನಾಕಾ ಗೀತಮಾಲಾ’ ಕಾರ್ಯಕ್ರಮ ಆಲಿಸುತ್ತಿದ್ದ ಲಕ್ಷಾಂತರ ಶ್ರೋತೃಗಳ ಪಾಲಿಗೆ ಚಿರಪರಿಚಿತರಾಗಿದ್ದ ಅಮೀನ್ ಸಯಾನಿ (91) ಮುಂಬೈನಲ್ಲಿ ನಿಧನರಾದರು.

ಸಯಾನಿ ಅವರಿಗೆ ಮಂಗಳವಾರ ಸಂಜೆ ಹೃದಯಾಘಾತ ಆಗಿತ್ತು. ಅವರನ್ನು ದಕ್ಷಿಣ ಮುಂಬೈನ ಎಚ್.ಎನ್. ರಿಲಯನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಉಳಿಸಿಕೊಳ್ಳಲು ಆಗಲಿಲ್ಲ. ಅವರು ಮಂಗಳವಾರ ರಾತ್ರಿ ನಿಧನರಾದರು ಎಂದು ಅವರ ಮಗ ರಜಿಲ್ ತಿಳಿಸಿದರು. ಗುರುವಾರ ಅಂತಿಮ ಸಂಸ್ಕಾರ ನಡೆಯಲಿದೆ.

‘ಸಹೋದರಿಯರೇ ಸಹೋದರರೇ, ನಮಸ್ಕಾರ. ನಾನು ನಿಮ್ಮ ಸ್ನೇಹಿತ ಅಮೀನ್ ಸಯಾನಿ ಮಾತನಾಡುತ್ತಿದ್ದೇನೆ’ ಎಂದು ಅವರು ರೇಡಿಯೊ ಸಿಲೋನ್‌ನಲ್ಲಿ ಹಿಂದಿಯಲ್ಲಿ ಮಾತು ಆರಂಭಿಸುತ್ತಿದ್ದರು. 1952ರಿಂದ 1988ರವರೆಗೆ ಅಸಂಖ್ಯ ಮನೆಗಳನ್ನು, ಮನಗಳನ್ನು ಅವರು ತಮ್ಮ ದನಿಯ ಮೂಲಕ ತಲುಪಿದ್ದರು.

1988ರ ನಂತರ ಬಿನಾಕಾ ಗೀತಮಾಲಾ ಕಾರ್ಯಕ್ರಮವನ್ನು ಆಲ್‌ ಇಂಡಿಯಾ ರೇಡಿಯೊದ ‘ವಿವಿಧ ಭಾರತಿ’ಗೆ ವರ್ಗಾಯಿಸಲಾಯಿತು. ಅಲ್ಲಿ ಅದು 1994ರವರೆಗೆ ಪ್ರಸಾರವಾಯಿತು. ಮುಂಬೈನ ಬಹುಭಾಷಿಕ ಕುಟುಂಬವೊಂದರಲ್ಲಿ 1932ರ ಡಿಸೆಂಬರ್ 21ರಂದು ಜನಿಸಿದ ಸಯಾನಿ, 42 ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳಿಗೆ ಧ್ವನಿ ನೀಡಿದ್ದಾರೆ.

‘ಭಾರತೀಯ ರೇಡಿಯೊ ಪ್ರಸಾರದಲ್ಲಿ ಕ್ರಾಂತಿಯನ್ನು ಉಂಟುಮಾಡುವಲ್ಲಿ ಸಯಾನಿ ಅವರು ತಮ್ಮ ಕೆಲಸಗಳ ಮೂಲಕ ಮುಖ್ಯವಾದ ಪಾತ್ರ ನಿಭಾಯಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ ವೇದಿಕೆಯಲ್ಲಿ ಬರೆದಿದ್ದಾರೆ.

ಸಯಾನಿ ಅವರು ಬಾಲ್ಯದಿಂದಲೂ ಸೃಜನಶೀಲ ವ್ಯಕ್ತಿಯಾಗಿದ್ದರು. ತಾಯಿ ನಡೆಸುತ್ತಿದ್ದ ಪಾಕ್ಷಿಕ ಪತ್ರಿಕೆಗೆ ತಮ್ಮ 13ನೆಯ ವಯಸ್ಸಿನಿಂದಲೇ ಬರೆಯಲು ಆರಂಭಿಸಿದರು. ಆಗಲೇ ಅವರು ಇಂಗ್ಲಿಷ್‌ನ ರೇಡಿಯೊ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಪರಿಣತಿ ಸಾಧಿಸಿದರು.

ಗ್ವಾಲಿಯರ್‌ನಲ್ಲಿ ಶಿಕ್ಷಣ ಪಡೆದು ಮುಂಬೈಗೆ ಹಿಂದಿರುಗಿದ ನಂತರ ಸಯಾನಿ ಅವರು ಎಐಆರ್‌ನ ಹಿಂದಿ ವಿಭಾಗಕ್ಕೆ ಆಡಿಷನ್ ನೀಡಿದ್ದರು. ಆದರೆ, ಅವರ ಮಾತಿನಲ್ಲಿ ತುಸು ಗುಜರಾತಿ ಶೈಲಿ ಇದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸಿಗಲಿಲ್ಲ. ಹೀಗಿದ್ದರೂ, ಅವರು ಜನಪ್ರಿಯತೆ ಪಡೆಯುವುದು ವಿಧಿಲಿಖಿತವಾಗಿತ್ತು.

1952ರಲ್ಲಿ ಎಐಆರ್‌ನಲ್ಲಿ ಹಿಂದಿ ಚಿತ್ರಗೀತೆಗಳ ಪ್ರಸಾರ ನಿಷೇಧಿಸಲಾಯಿತು. ಆ ಹೊತ್ತಿನಲ್ಲಿ ರೇಡಿಯೊ ಸಿಲೋನ್ ಜನಪ್ರಿಯತೆ ಪಡೆಯಲಾರಂಭಿಸಿತು. ಸಯಾನಿ ಅವರು ರೇಡಿಯೊ ಸಿಲೋನ್‌ನಲ್ಲಿ ‘ಬಿನಾಕಾ ಗೀತಮಾಲಾ’ ಕಾರ್ಯಕ್ರಮದ ನಿರೂಪಕರಾದರು. ನಂತರದ್ದೆಲ್ಲ ಇತಿಹಾಸ. ಈ ಕಾರ್ಯಕ್ರಮವು ಭಾರಿ ಜನಪ್ರಿಯತೆಯೊಂದಿಗೆ 42 ವರ್ಷ ಪ್ರಸಾರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT