ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಲ್ಪಸಂಖ್ಯಾತರಿಗೆ ಅವಕಾಶ ಇರುವಂತೆ, ಹಿಂದೂಗಳಿಗೂ ಗುಡಿಗಳ ನಿರ್ವಹಣೆ ಕೊಡಿ: VHP

Published : 24 ಸೆಪ್ಟೆಂಬರ್ 2024, 16:03 IST
Last Updated : 24 ಸೆಪ್ಟೆಂಬರ್ 2024, 16:03 IST
ಫಾಲೋ ಮಾಡಿ
Comments

ನವದೆಹಲಿ: ‘ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸದಿದ್ದರೆ, ಶೀಘ್ರದಲ್ಲಿ ದೇಶವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂಗಳವಾರ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ‘ಹಿಂದೂ ದೇವಾಲಯಗಳನ್ನು ರಾಜ್ಯ ಸರ್ಕಾರಗಳು ಹಿಂದೂಗಳಿಗೆ ಸೇರಿದ ಸಂಸ್ಥೆಗಳಿಗೆ ಬಿಟ್ಟುಕೊಡದಿದ್ದರೆ ನ್ಯಾಯಾಲಯದಲ್ಲೂ ಹೋರಾಟ ನಡೆಸಲಾಗುವುದು’ ಎಂದರು.

‘ಈ ಅಭಿಯಾನದ ಭಾಗವಾಗಿ, ಮೊದಲು ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ಕಾನೂನು ನೆರವನ್ನೂ ಪಡೆಯಲಾಗುತ್ತಿದೆ. ಒಂದೊಮ್ಮೆ, ಹೋರಾಟ ಅನಿವಾರ್ಯವಾದರೆ, ಅದನ್ನೂ ವಿಎಚ್‌ಪಿ ಆರಂಭಿಸಲಿದೆ’ ಎಂದು ಹೇಳಿದರು.

‘ಪ್ರಾಣಿಗಳ ಕೊಬ್ಬು ಪತ್ತೆಯಾಗಿರುವ ಪ್ರಕರಣದಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯದ ಲಾಡು ಪ್ರಸಾದವಷ್ಟೇ ಮೊದಲಲ್ಲ, ಈ ಹಿಂದೆ ಕೇರಳದ ಶಬರಿಮಲೆಯ ದೇಗುಲದಲ್ಲೂ ಪವಿತ್ರ ಪ್ರಸಾದವಾದ ಪಾಯಸವನ್ನು ಅಪವಿತ್ರಗೊಳಿಸುವ ಯತ್ನ ನಡೆದಿತ್ತು’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟ ದೇವಾಲಯಗಳಲ್ಲಿ ಹಣಕಾಸು ಅವ್ಯವಹಾರ ಹಾಗೂ ದುರ್ಬಳಕೆ ನಡೆದ ಹಲವು ವರದಿಗಳಿವೆ. ಆದರೆ ಇವೆಲ್ಲವುಗಳಲ್ಲೂ ಒಂದು ಸಾಮ್ಯತೆ ಏನೆಂದರೆ, ನಿರ್ದಿಷ್ಟ ರಾಜ್ಯ ಸರ್ಕಾರಗಳು ಇರುವಲ್ಲೇ ಇಂಥ ಘಟನೆಗಳು ನಡೆಯುತ್ತಿವೆ. ಇದರಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹಿಂದೂಗಳ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ದೂರಿದರು.

‘ತಮಿಳುನಾಡು ಒಂದರಲ್ಲೇ 400 ದೇಗುಲಗಳು ಸರ್ಕಾರದ ನಿಯಂತ್ರಣದಲ್ಲಿವೆ ಎಂದು ಸಮೀಕ್ಷೆ ಹೇಳಿದೆ. ಇವುಗಳಿಂದ ವಾರ್ಷಿಕ ₹6 ಸಾವಿರ ಕೋಟಿ ಆದಾಯ ರಾಜ್ಯ ಸರ್ಕಾರಕ್ಕೆ ಬರುತ್ತಿದೆ. ಆದರೆ ₹200 ಕೋಟಿ ಆದಾಯ ಎಂದು ತಪ್ಪಾಗಿ ತೋರಿಸಲಾಗುತ್ತಿದೆ. ₹270 ಕೋಟಿ ವೆಚ್ಚ ಎಂದು ಸರ್ಕಾರ ಲೆಕ್ಕ ಹೇಳುತ್ತಿದೆ. ಹೀಗೆ ತಮಿಳುನಾಡು ಒಂದರಲ್ಲೇ ಕಳೆದ ಹತ್ತು ವರ್ಷಗಳಲ್ಲಿ ₹50 ಸಾವಿರ ಕೋಟಿ ನಷ್ಟವಾಗಿದೆ’ ಎಂದು ಜೈನ್ ಹೇಳಿದ್ದಾರೆ.

’ರಾಜಸ್ಥಾನದಲ್ಲಿ ಈ ಹಿಂದೆ ಅಶೋಕ್ ಗೆಹಲೋತ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೋವಿಂದ ದೇವ್ ಮಂದಿರದ ₹9.82 ಕೋಟಿ ಹಣವನ್ನು ಈದ್ಗಾಕ್ಕೆ ನೀಡಲಾಗಿತ್ತು. ಅಲ್ಪಸಂಖ್ಯಾತರು ಅವರ ಧಾರ್ಮಿಕ ಕೇಂದ್ರಗಳನ್ನು ಅವರೇ ನಡೆಸುವುದಾದರೆ, ಹಿಂದೂಗಳಿಗೂ ದೇವಾಲಯಗಳನ್ನು ಬಿಟ್ಟುಕೊಡಿ’ ಎಂದು ಆಗ್ರಹಿಸಿದರು.

ತಿರುಪತಿ ಲಾಡು ವಿವಾದ ಕುರಿತು ಪ್ರತಿಕ್ರಿಯಿಸಿದ ಸುರೇಂದ್ರ ಜೈನ್, ‘ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಆಂಧ್ರಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯಿಂದ ಸತ್ಯ ಹೊರತರಲು ಸಾಧ್ಯವಿಲ್ಲ’ ಎಂದರು.

‘ಸಂವಿಧಾನದ 12ನೇ ವಿಧಿ ಪ್ರಕಾರ ದೇಶ ಅಥವಾ ರಾಜ್ಯಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಲಾಗಿದೆ. ಹಾಗಿದ್ದರೆ ದೇವಾಲಯಗಳ ಆಡಳಿತ ನಿರ್ವಹಿಸಲು ರಾಜ್ಯ ಸರ್ಕಾರಗಳಿಗೆ ಏನು ಅಧಿಕಾರವಿದೆ? ನಮ್ಮ ಸಂಸ್ಥೆಗಳನ್ನು ನಾವೇ ನಡೆಸಲು ಸಂವಿಧಾನದ 25 ಹಾಗೂ 26ನೇ ವಿಧಿಯಲ್ಲಿ ಅವಕಾಶ ನೀಡಲಾಗಿದೆ. ದಾಳಿಕೋರರು ಹಿಂದೂಗಳ ದೇಗುಲಗಳನ್ನು ಧ್ವಂಸಗೊಳಿಸ, ಲೂಟಿ ಮಾಡಿದರು. ಬ್ರಿಟಿಷರು ದೇಗುಲಗಳನ್ನು ತಮ್ಮ ವಶಕ್ಕೆ ಪಡೆದು, ಶಾಶ್ವತವಾಗಿ ಲೂಟಿ ಮಾಡುವ ಯೋಜನೆ ರೂಪಿಸಿದರು. ದುರದೃಷ್ಟವಶಾತ್ ಈ ದೇಶದ ರಾಜಕಾರಣಿಗಳು ಅದೇ ವಸಾಹತುಶಾಹಿ ಮನಸ್ಥಿತಿಯನ್ನು ಹೊಂದಿದ್ದಾರೆ. ಸ್ವಾತಂತ್ರ್ಯದ ನಂತರವೂ ಅದು ಮುಂದುವರಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT