ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಮಗಳಾಗಿದ್ದ ವಿನೇಶ್, ಕಾಂಗ್ರೆಸ್ ಪುತ್ರಿಯಾಗಲು ಬಯಸಿದರೆ ನಾವೇನು ಮಾಡೋಣ: BJP

Published : 6 ಸೆಪ್ಟೆಂಬರ್ 2024, 11:25 IST
Last Updated : 6 ಸೆಪ್ಟೆಂಬರ್ 2024, 11:25 IST
ಫಾಲೋ ಮಾಡಿ
Comments

ಚಂಡೀಗಢ: ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ಬಿಜೆಪಿ ನಾಯಕ ಅನಿಲ್‌ ವಿಜ್‌ ಟೀಕಿಸಿದ್ದಾರೆ. ದೇಶದ ಮಗಳಾಗಿದ್ದ ಫೋಗಟ್‌ ಅವರು ಕಾಂಗ್ರೆಸ್‌ ಪುತ್ರಿಯಾಗಲು ಬಯಸಿದ್ದಾರೆ ಎಂದಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದ್ದು, ಫೋಗಟ್‌ ಅವರೊಂದಿಗೆ ಮತ್ತೊಬ್ಬ ಕುಸ್ತಿಪಟು ಬಜರಂಗ್ ಪೂನಿಯಾ ಅವರೂ ಕಾಂಗ್ರೆಸ್‌ ಸೇರಿದ್ದಾರೆ.

ಈ ಕುರಿತು ಮಾತನಾಡಿರುವ ಅನಿಲ್‌, 'ದೇಶದ ಮಗಳಾಗಿದ್ದ ವಿನೇಶ್‌ ಅವರು ಕಾಂಗ್ರೆಸ್ ಪುತ್ರಿಯಾಗಲು ಬಯಸುತ್ತಿದ್ದಾರೆ ಎಂದರೆ, ನಾವು ಯಾವ ರೀತಿ ಆಕ್ಷೇಪಿಸಲು ಸಾಧ್ಯ' ಎಂದು ಕೇಳಿದ್ದಾರೆ.

ಹರಿಯಾಣದ ಮಾಜಿ ಗೃಹ ಸಚಿವರೂ ಆಗಿರುವ ಅನಿಲ್‌, ಈ ಕುಸ್ತಿಪಟುಗಳನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಕಾಂಗ್ರೆಸ್ ಆರಂಭದಿಂದಲೂ ಪ್ರಯತ್ನಿಸುತ್ತಿತ್ತು. ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಅದೇ ಪ್ರೇರಣೆ ಎಂದು ಆರೋಪಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ಕಳೆದ ವರ್ಷ ಭಾರಿ ಪ್ರತಿಭಟನೆ ನಡೆಸಿದ್ದರು. ಫೋಗಟ್‌, ಪೂನಿಯಾ ಹಾಗೂ ಸಾಕ್ಷಿ ಮಲಿಕ್‌ ಅವರು ಮುಂದಾಳತ್ವ ವಹಿಸಿದ್ದರು.

ಕಾಂಗ್ರೆಸ್‌ ಪ್ರೇರಣೆಯಿಂದಾಗಿಯೇ ಕುಸ್ತಿಪಟುಗಳ ಹೋರಾಟ ಮುಂದುವರಿದಿದೆ. ಇಲ್ಲದಿದ್ದರೆ, ಅದು ಯಾವಾಗಲೋ ಇತ್ಯರ್ಥವಾಗಿರುತ್ತಿತ್ತು ಎಂದು ಅನಿಲ್‌ ದೂರಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರನ್ನು ದೆಹಲಿಯಲ್ಲಿ ಭೇಟಿಯಾದ ಫೋಗಟ್‌ ಮತ್ತು ಪೂನಿಯಾ, ಎಐಸಿಸಿ ಪ್ರಧಾನ ಕಚೇರಿಯಲ್ಲಿ ಅಧಿಕೃತವಾಗಿ ಇಂದು (ಶುಕ್ರವಾರ) ಪಕ್ಷ ಸೇರಿದ್ದಾರೆ. ಫೋಗಟ್‌ ಅವರು ವೈಯಕ್ತಿಕ ಕಾರಣ ನೀಡಿ ರೈಲ್ವೆ ಇಲಾಖೆಯ ಹುದ್ದೆಗೂ ಇಂದು ರಾಜೀನಾಮೆ ನೀಡಿದ್ದಾರೆ.

2021ರ ಟೊಕಿಯೊ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಫೋಗಟ್‌, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಫೈನಲ್‌ ತಲುಪಿದ್ದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪಿದ ಭಾರತದ ಮೊದಲ ಕುಸ್ತಿಪಟು ಎನಿಸಿದ್ದರು. ಆದರೆ, ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಅವರನ್ನು ಫೈನಲ್‌ ಸೆಣಸಾಟದಿಂದ ಅನರ್ಹಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT