ನವದೆಹಲಿ: ಭಾರತದ ಜಿ 20 ಶೃಂಗಸಭೆಯು ಮುಕ್ತಾಯದ ಹಂತ ತಲುಪಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹವಾಮಾನ ನಿಧಿಗೆ ದಾಖಲೆಯ ನೆರವು ಘೋಷಿಸಿದ್ದಾರೆ.
ಹಸಿರು ಪರಿಸರ ನಿಧಿಗೆ(ಜಿಸಿಎಫ್) ಬ್ರಿಟನ್‌ನಿಂದ 2 ಶತಕೋಟಿ ಡಾಲರ್ ಒದಗಿಸುವುದಾಗಿ ಅವರು ತಿಳಿಸಿದ್ದಾರೆ. ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಕ್ಕೆ ಸಹಾಯ ಮಾಡಲು ದೇಶವೊಂದು ನೀಡಿದ ಅತಿದೊಡ್ಡ ನೆರವಾಗಿದೆ.
ಕೋಪನ್ ಹೇಗನ್ ಒಪ್ಪಂದದ ನಂತರ, 194 ದೇಶಗಳು ಈ ನಿಧಿಯನ್ನು ಸ್ಥಾಪಿಸಿವೆ.
ಯಾವುದೇ G7 ದೇಶಗಳಿಗಿಂತ ವೇಗವಾಗಿ ಮಾಲಿನ್ಯ ಕಡಿತಗೊಳಿಸಿದ ಶ್ರೇಯ ಬ್ರಿಟನ್‌ದ್ದಾಗಿದೆ ಎಂದು ದೆಹಲಿಯಲ್ಲಿರುವ ಬ್ರಿಟಿಷ್ ಹೈ ಕಮಿಷನ್ ಹೇಳಿದೆ. 2020-2023ರ ಅವಧಿಗೆ ನಡುವೆ ನೀಡಿದ ದೇಣಿಗೆಗಿಂತ ಶೇಕಡ 12.7ರಷ್ಟನ್ನು ಬ್ರಿಟನ್ ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಜಿಸಿಎಫ್, ಜಾಗತಿಕ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಸಮುದಾಯಗಳಿಗೆ ಸಹಾಯ ಮಾಡಲು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸಲು ಮೀಸಲಾಗಿರುವ ಅತಿದೊಡ್ಡ ಜಾಗತಿಕ ನಿಧಿಯಾಗಿದೆ.
ತಮ್ಮ ದೇಶಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದುರ್ಬಲ ಆರ್ಥಿಕತೆಗಳನ್ನು ಬೆಂಬಲಿಸಲು ಒಟ್ಟಾಗಿ ಕೆಲಸ ಮಾಡಲು ಜಿ–20 ನಾಯಕರಿಗೆ ರಿಷಿ ಸುನಕ್ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.