ಚೆನ್ನೈ: ಇಡೀ ಭಾರತವು ಮಣಿಪುರ ಮತ್ತು ಹರಿಯಾಣವಾಗಿ ಬದಲಾಗುವುದನ್ನು ತಪ್ಪಿಸಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಗೆಲ್ಲಬೇಕಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ
ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ನಾಲ್ಕು ಭಾಷೆಗಳಲ್ಲಿ ಪ್ರಸಾರವಾದ ‘ಸ್ಪೀಕಿಂಗ್ ಫಾರ್ ಇಂಡಿಯಾ’ ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆಯಲ್ಲಿ ಮಾತನಾಡಿದ ಸ್ಟಾಲಿನ್, ಮಣಿಪುರ ಹಿಂಸಾಚಾರ ಮತ್ತು ಹರಿಯಾಣ ನೂಹ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಕೇಂದ್ರ ಬಿಜೆಪಿ ಸರ್ಕಾರ ಭರವಸೆ ನೀಡಿದ ಯಾವುದನ್ನು ಇಲ್ಲಿಯತನಕ ಪೂರೈಸಿಲ್ಲ. ದೇಶದ ನಾಗರಿಕರ ಖಾತೆಗೆ ₹15 ಲಕ್ಷ ಜಮಾ ಆಗಿಲ್ಲ. ರೈತರ ಆದಾಯ ದ್ವಿಗುಣಗೊಂಡಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
‘2002ರಲ್ಲಿ ಗುಜರಾತ್‌ನಲ್ಲಿ ಬಿತ್ತಲಾದ ದ್ವೇಷದ ಮುಂದುವರಿದ ಭಾಗವೇ ಮಣಿಪುರದ ಜನಾಂಗೀಯ ಹಿಂಸಾಚಾರ ಮತ್ತು ಹರಿಯಾಣದ ಕೋಮು ಗಲಭೆ’ ಎಂದು ಕಿಡಿಕಾರಿದರು.
‘ಸಾಮಾಜಿಕ ನ್ಯಾಯ, ಸಾಮಾಜಿಕ ಸಾಮರಸ್ಯವನ್ನು ಮರುಸ್ಠಾಪಿಸುವ ಉದ್ದೇಶದಿಂದ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಲಾಗಿದೆ. ದೇಶದ ಸದ್ಯದ ಪರಿಸ್ಥಿತಿಯನ್ನು ಇಲ್ಲಿಗೆ ಹತೋಟಿಗೆ ತರದೇ ಹೋದರೆ ಭಾರತವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.