ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಬ್ರೌಸರ್ ಅಭಿವೃದ್ಧಿಪಡಿಸಿದರೆ ಸಿಗಲಿದೆ ₹3.4 ಕೋಟಿ ಬಹುಮಾನ!

Published 10 ಆಗಸ್ಟ್ 2023, 14:28 IST
Last Updated 10 ಆಗಸ್ಟ್ 2023, 14:28 IST
ಅಕ್ಷರ ಗಾತ್ರ

ನವದೆಹಲಿ: ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ಭಾರತ, ಡಿಜಿಟಲ್‌ ಕ್ಷೇತ್ರದಲ್ಲೂ ತನ್ನದೇ ಹಿಡಿತ ಸಾಧಿಸಲು ಇದೀಗ ದೇಸಿ ನಿರ್ಮಿತ ಬ್ರೌಸರ್ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ. 

ಭಾರತದಲ್ಲಿ ಸದ್ಯ ಸುಮಾರು 85 ಕೋಟಿ ಇಂಟರ್‌ನೆಟ್‌ ಬಳಕೆದಾರರಿದ್ದಾರೆ. ಇವರಲ್ಲಿ ಶೇ 88ರಷ್ಟು ಜನ ಗೂಗಲ್ ಕ್ರೋಮ್ ಬಳಸುತ್ತಿದ್ದಾರೆ ಎಂದು ಸಿಮಿಲರ್ ವೆಬ್‌ನ ಜುಲೈ ತಿಂಗಳ ದಾಖಲೆ ಹೇಳುತ್ತದೆ.

ಜತೆಗೆ ಆತ್ಮನಿರ್ಭರ ಭಾರತದ ಯೋಜನೆಯ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರವು ತನ್ನದೇ ಆದ ದೇಸಿ ನಿರ್ಮಿತ ವೆಬ್‌ ಬ್ರೌಸರ್‌ ಅಭಿವೃದ್ಧಿಪಡಿಸುವ ಚಿಂತನೆ ನಡೆಸಿದೆ. ಇದು ಗೂಗಲ್ ಕ್ರೋಮ್, ಮೊಝಿಲಾ ಫೈರ್‌ಫಾಕ್ಸ್‌, ಮೈಕ್ರೊಸಾಫ್ಟ್ ಎಡ್ಜ್‌, ಒಪೆರಾ ಹಾಗೂ ಇತರ ಬ್ರೌಸರ್‌ಗಳಂತೆಯೇ ಕಾರ್ಯ ನಿರ್ವಹಿಸಬೇಕು ಎಂಬುದು ಸರ್ಕಾರದ ನಿರೀಕ್ಷೆ.

ವಿಶ್ವ ಮಟ್ಟದ ದೇಸಿ ಬ್ರೌಸರ್ ಅಭಿವೃದ್ಧಿಪಡಿಸುವವರಿಗೆ ₹3.4 ಕೊಟಿ ಬಹುಮಾನ ನೀಡಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಯಾವುದೇ ಸೈಬರ್ ದಾಳಿಗೆ ತುತ್ತಾಗದ ಎಸ್‌ಎಸ್‌ಎಲ್ ಸರ್ಟಿಫಿಕೇಟ್‌ ಹೊಂದಿರುವ ಬ್ರೌಸರ್ ಇದಾಗಿರಬೇಕು.

‘ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿರುವ ದೇಶವು, ತನ್ನದೇ ಆದ ಡಿಜಿಟಲ್ ಪಥವನ್ನು ಹೊಂದುವುದು ಅಗತ್ಯ. ದೇಶದ ಜನರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ವಿದೇಶಿ ಬ್ರೌಸರ್‌ಗಳ ಮೇಲಿನ ಅವಲಂಬನೆ ತಗ್ಗಿಸುವುದು ಸೂಕ್ತ. ಹೀಗಾಗಿ ದೇಸಿ ಬ್ರೌಸರ್ ಮೂಲಕ ಆತ್ಮನಿರ್ಭರರಾಗುವ ಯೋಜನೆ ಇದಾಗಿದೆ’ ಎಂದು ಅಧಿಕಾರಿಗಳು ಹೇಳಿದ್ಧಾರೆ.

'ಬ್ರೌಸರ್‌ಗಳ ಟ್ರಸ್ಟ್ ಸ್ಟೋರ್ ಅಥವಾ ರೂಟ್ ಸ್ಟೋರ್‌ಗಳ ಪಟ್ಟಿಯಲ್ಲಿ ಸೇರಿರುವ ಪ್ರಮಾಣಿತ ಪ್ರಾಧಿಕಾರಗಳ ಮಾನ್ಯತೆಗಳು ಹೆಚ್ಚು ನಂಬುಗೆ ಹೊಂದಿರುತ್ತವೆ. ಗೂಗಲ್ ಮತ್ತು ಮೊಝಿಲಾ ಫೈರ್‌ಫಾಕ್ಸ್‌ನಂತ ಅಮೆರಿಕ ಮೂಲದ ಕಂಪನಿಗಳು ತಮ್ಮದೇ ಆದ ಪ್ರಮಾಣಿತ ಸ್ಟೋರ್‌ಗಳಲ್ಲಿ ಭಾರತದ ಅಂತರ್ಜಾಲ ಭದ್ರತಾ ಪ್ರಮಾಣೀಕರಣ ಪ್ರಾಧಿಕಾರವನ್ನು ಸೇರಿಸಿಕೊಳ್ಳುವಂತೆ ಮನವೊಲಿಸುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದೂ ಮೂಲಗಳು ಹೇಳಿವೆ.

ಗೂಗಲ್‌ ತನ್ನ ಕ್ರೋಮ್ ಬ್ರೌಸರ್‌ನಲ್ಲಿ ವೆಬ್‌ ಜಿಪಿಯು ಅಳವಡಿಸಿಕೊಂಡಿದ್ದು, ಇದು ವೆಬ್ ಗೇಮಿಂಗ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಅದರ ಬಳಕೆದಾರರ ಸಂಖ್ಯೆ ಶೇ 88ಕ್ಕೆ ಏರಿದೆ. ಸಫಾರಿ ಶೇ 5.22ರಷ್ಟನ್ನು ಹೊಂದಿದೆ, ಮೈಕ್ರೊಸಾಫ್ಟ್ ಎಡ್ಜ್‌ ಶೇ 2ರಷ್ಟು, ಸ್ಯಾಮ್ಸಂಗ್‌ ಇಂಟರ್‌ನೆಟ್‌ ಶೇ 1.5ರಷ್ಟು, ಮೊಝಿಲಾ ಫೈರ್‌ಫಾಕ್ಸ್ ಶೇ 1.28ರಷ್ಟು ಹಾಗೂ ಇತರ ಬ್ರೌಸರ್‌ಗಳ ಬಳಕೆದಾರರ ಸಂಖ್ಯೆ ಶೇ 1.53ರಷ್ಟಿದೆ.

ಭಾರತ ಮೂಲದ ಬಹುರಾಷ್ಟ್ರೀಯ ಕಂಪನಿಯ Zoho ಸಂಸ್ಥೆಯ Ulaa ವೆಬ್‌ ಬ್ರೌಸರ್‌ ಅಳವಡಿಸುವತ್ತ ಚಿಂತನೆಯನ್ನು ಸರ್ಕಾರದ ಸಂಸ್ಥೆಗಳು ಹೊಂದಿವೆ. ದೇಸಿ ನಿರ್ಮಿತ ವೆಬ್‌ ಬ್ರೌಸರ್‌ 2024ರ ವೇಳೆಗೆ ಬಳಕೆಗೆ ಲಭ್ಯವಾಗಲಿದೆ ಎಂದೆನ್ನಲಾಗಿದೆ. ಇದಕ್ಕಾಗಿ ದೇಸಿ ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್‌ಗಳು ಪಾಲ್ಗೊಳ್ಳುವಂತೆ ಆಹ್ವಾನಿಸಿದೆ. ವೆಬ್‌–3 ಮಾದರಿಯದ್ದಾಗಿರಬೇಕು. ಭಾರತೀಯ ಭಾಷೆಗಳಿಗೆ ನೆರವಾಗುವಂತಿರಬೇಕು. ಹೀಗಿದ್ದರೆ ದೇಸಿ ನಿರ್ಮಿತ ವೆಬ್‌ ಬ್ರೌಸರ್‌ಗಳನ್ನು ಪಡೆಯುವ ನಿಟ್ಟಿನಲ್ಲೂ ಚಿಂತನೆ ನಡೆದಿದೆ’ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT