ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2,000 ನೋಟು ರದ್ಧತಿ | ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

Published 20 ಮೇ 2023, 13:26 IST
Last Updated 20 ಮೇ 2023, 13:26 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ.  

‘ನೋಟು ರದ್ದತಿಯ ತೀರ್ಮಾನ ಕೈಗೊಳ್ಳುವ ಮೂಲಕ ನೀವು ಆರ್ಥಿಕತೆಯನ್ನು ಅಧೋಗತಿಗೆ ತಳ್ಳಿದಿರಿ. ನಿಮ್ಮ ತಪ್ಪು ನಿರ್ಧಾರದಿಂದಾಗಿ ಇಡೀ ಅಸಂಘಟಿತ ವಲಯವೇ ನಾಶವಾಗಿ ಹೋಗಿತ್ತು. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳು ಬಾಗಿಲು ಹಾಕಬೇಕಾಯಿತು. ಇದರಿಂದಾಗಿ ಕೋಟ್ಯಂತರ ಉದ್ಯೋಗ ನಷ್ಟವೂ ಉಂಟಾಗಿತ್ತು’ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿದ್ದಾರೆ.

‘ಈಗ ಮತ್ತೆ ನೋಟು ರದ್ದತಿಯ ನಿರ್ಧಾರ ಪ್ರಕಟಿಸಿದ್ದೀರಿ. ಇದು ಹಿಂದಿನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನದ ಭಾಗವೇ? ಈ ಕುರಿತು ಪಾರದರ್ಶಕ ತನಿಖೆ ನಡೆಯಲಿ. ಆಗ ಮಾತ್ರ ಸತ್ಯ ಬಹಿರಂಗವಾಗಲಿದೆ’ ಎಂದು ಆಗ್ರಹಿಸಿದ್ದಾರೆ.

‘ಇದು ಮತ್ತೊಂದು ರೀತಿಯ ಹುಚ್ಚಾಟ. ಆರ್‌ಬಿಐನ ನಿರ್ಧಾರದಿಂದಾಗಿ ನಾಗರಿಕರು ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

‘ಇದು ಚಂಚಲ ಮನಸ್ಥಿತಿಯ ನಡೆ. ನೋಟು ರದ್ದತಿಗೂ ಮುನ್ನ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿಲುವು ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ದೇಶದ ಜನ ಇಂತಹ ನಡೆಗಳನ್ನು ಸಹಿಸುವುದಿಲ್ಲ’ ಎಂದು ಮಹಾರಾಷ್ಟ್ರ ನವ ನಿರ್ಮಾಣ (ಎಂಎನ್‌ಎಸ್‌) ‍ಪಕ್ಷದ ಮುಖ್ಯಸ್ಥ ರಾಜ್‌ ಠಾಕ್ರೆ ಟೀಕಿಸಿದ್ದಾರೆ.

ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆಯನ್ನು ನಾಶಪಡಿಸುತ್ತಿದೆ. ನೋಟು ರದ್ದತಿಯಿಂದಾಗಿ ಜನರು ಕೆಲಸ ಕಾರ್ಯ ಬಿಟ್ಟು ಎಟಿಎಂಗಳ ಎದುರು ಸಾಲುಗಟ್ಟಿ ನಿಲ್ಲಬೇಕಾಗಿತ್ತು. ಈಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಆರೋಪಿಸಿದ್ದಾರೆ.

‘₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯುತ್ತಿರುವುದು ಅವಿವೇಕದ ನಡೆ’ ಎಂದು ಭಾರತ ರಾಷ್ಟ್ರ ಸಮಿತಿಯು (ಬಿಆರ್‌ಎಸ್‌) ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT