ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ; CCTV ಕ್ಯಾಮೆರಾದಲ್ಲಿ ಇಬ್ಬರು ಯುವಕರ ಸೆರೆ

Published 27 ಡಿಸೆಂಬರ್ 2023, 13:30 IST
Last Updated 27 ಡಿಸೆಂಬರ್ 2023, 13:30 IST
ಅಕ್ಷರ ಗಾತ್ರ

ನವದೆಹಲಿ: ‘ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರೀಯ ತನಿಖಾ ದಳ (ಎನ್‌ಎಸ್‌ಜಿ) ಹಾಗೂ ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಬಳಸಿದ ರಾಸಾಯನಿಕ ಯಾವುದು ಎಂಬ ಮಾಹಿತಿ ಸಂಗ್ರಹಿಸಲು ಅಲ್ಲಿನ ಎಲೆ, ಹುಲ್ಲುಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಎನ್‌ಎಸ್‌ಜಿಯ ಶ್ವಾನ ದಳವೂ ಸ್ಥಳಕ್ಕೆ ಭೇಟಿ ನೀಡಿತು.

‘ಆಯಸ್ಕಾಂತೀಯ ಗ್ಯಾಜೆಟ್‌ಗಳನ್ನು ಬಳಸಿ ಸ್ಫೋಟದ ತೀವ್ರತೆಯನ್ನು ತಜ್ಞರು ಪರೀಕ್ಷಿಸಿದರು. ದೆಹಲಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಸ್ಥಳದ ಮಹಜರು ನಡೆಸಿದರು. ಸ್ಥಳದಲ್ಲಿ ಅರೆ ಸೇನಾ ಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ. ಎಫ್‌ಐಆರ್ ದಾಖಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸ್ಫೋಟ ಸಂಭವಿಸಿದ ದೆಹಲಿಯ ಚಾಣಕ್ಯಪುರಿ ಎಂಬೆಸಿ ಎನ್‌ಕ್ಲೇವ್‌ ಮತ್ತು ಯಹೂದಿಗಳಿಗೆ ಸೇರಿದ ಸಂಸ್ಥೆಗಳಿರುವಲ್ಲಿ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣನ್ನು ನೆಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಘಟನಾ ಸ್ಥಳದ ಸುತ್ತಮುತ್ತಲಿನ ಅಬ್ದುಲ್ ಕಲಾಂ ರಸ್ತೆ, ಪೃಥ್ವಿರಾಜ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ. ಇದರಲ್ಲಿ ಸ್ಫೋಟಕ್ಕೂ ಕೆಲ ನಿಮಿಷಗಳ ಮೊದಲು ಇಬ್ಬರು ಯುವಕರು ಸ್ಥಳದಿಂದ ಅನತಿ ದೂರದಲ್ಲಿ ಸಾಗಿರುವ ದೃಶ್ಯ ಇದೆ. ಇವರು ಶಂಕಿತರೇ ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದು ತಿಳಿಸಿದ್ದಾರೆ.

‘ಸ್ಫೋಟದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಯಾರೊಬ್ಬರೂ ಗಾಯಗೊಂಡಿಲ್ಲ. ರಾಯಭಾರ ಕಚೇರಿ ಬಳಿ ಅವಾಚ್ಯವಾಗಿ ನಿಂದಿಸಿರುವ ಪತ್ರ ಪತ್ತೆಯಾಗಿದೆ. ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸರ್ ಅಲ್ಲಾ ರೆಸಿಸ್ಟೆನ್ಸ್’ ಎಂಬ ಸಂಘಟನೆ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಇದರಲ್ಲಿ ಝಿಯೋನಿಸ್ಟ್‌, ಪ್ಯಾಲೆಸ್ಟೀನ್, ಗಾಝಾ ಎಂಬ ಪದಗಳ ಪ್ರಯೋಗವಿದೆ. 2021ರಲ್ಲಿ ಇದೇ ರಾಯಭಾರ ಕಚೇರಿ ಎದುರು ಸ್ಫೋಟ ಸಂಭವಿಸಿ, ಕೆಲ ಕಾರುಗಳು ಜಖಂಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT