ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುರಂಧ್ರ ಅಧ್ಯಯನಕ್ಕೆ ಇಸ್ರೊ ಮುನ್ನುಡಿ; ಎಕ್ಸ್‌ಪೊಸ್ಯಾಟ್‌ ಉಡಾವಣೆ ಯಶಸ್ವಿ

ರಾಮನ್‌ ಸಂಶೋಧನಾ ಸಂಸ್ಥೆ ಮತ್ತು ಇಸ್ರೊದಿಂದ ಜಂಟಿ ಪ್ರಯತ್ನ* ಎಕ್ಸ್‌ಪೊಸ್ಯಾಟ್‌ ಉಡಾವಣೆ ಯಶಸ್ವಿ
Published 1 ಜನವರಿ 2024, 16:07 IST
Last Updated 1 ಜನವರಿ 2024, 16:07 IST
ಅಕ್ಷರ ಗಾತ್ರ

ಶ್ರೀಹರಿಕೋಟ (ಆಂಧ್ರಪ್ರದೇಶ): ಬಾಹ್ಯಾಕಾಶದಲ್ಲಿ ಸೂಪರ್‌ನೋವಾ ಸ್ಫೋಟದ ಬಳಿಕ ಉಳಿಯುವ ನಕ್ಷತ್ರಗಳು, ನ್ಯೂಟ್ರಾನ್‌ ನಕ್ಷತ್ರಗಳು ಮತ್ತು ಕಪ್ಪುರಂಧ್ರಗಳ ಕುರಿತ ಅಧ್ಯಯನಕ್ಕೆ ಎಕ್ಸ್‌ಪೊಸ್ಯಾಟ್‌ (ಎಕ್ಸ್‌–ರೇ ಪೋಲಾರಿಮೆಟ್ರಿ ಉಪಗ್ರಹ) ಉಡಾವಣೆಯಲ್ಲಿ ಇಸ್ರೊ ಯಶಸ್ಸು ಕಂಡಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಹೊಸ ವರ್ಷದ ಸಂಭ್ರಮವನ್ನು ಆಚರಿಸಿದೆ.

ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯು ಎಕ್ಸ್‌–ರೇ ಪೋಲಾರಿಮೀಟರ್ ಸಾಧನವನ್ನು ಅಭಿವೃದ್ಧಿಪಡಿಸಿದೆ. ಈ ಉಪಗ್ರಹದ ಯಶಸ್ವಿ ಉಡಾವಣೆಯ ಮೂಲಕ, ಕಪ್ಪುರಂಧ್ರಗಳು, ನ್ಯೂಟ್ರಾನ್‌ ನಕ್ಷತ್ರಗಳ ಸಂಶೋಧನೆಗೆ ಮುಂದಾಗಿರುವ ಎರಡನೆಯ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇಸ್ರೊ ಪಾಲಿನ ವಿಶ್ವಾಸಾರ್ಹ ಉಡಾವಣಾ ವಾಹನ ಪಿಎಸ್‌ಎಲ್‌ವಿ ಬೆನ್ನೇರಿ ಸಾಗಿದ ಉಪಗ್ರಹಗಳ ಪೈಕಿ ಮಹಿಳೆಯರೇ ಸಿದ್ಧಪಡಿಸಿದ ಒಂದು ಉಪಗ್ರಹ ಕೂಡ ಸೇರಿದೆ. ಇದು ದೇಶದ ಪಾಲಿಗೆ ಒಂದು ಸ್ಫೂರ್ತಿ ಎಂದು ಇಸ್ರೊ ಹೇಳಿದೆ. ಎಕ್ಸ್‌ಪೊಸ್ಯಾಟ್‌ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ–ಸಿ58, ಉಪಗ್ರಹವನ್ನು ಭೂಮಿಯಿಂದ 650 ಕಿ.ಮೀ. ಎತ್ತರದಲ್ಲಿನ ಕಕ್ಷೆಗೆ ಸೇರಿಸಿತು.

ಎಕ್ಸ್‌ಪೊಸ್ಯಾಟ್‌ ಉಪಗ್ರಹವು ಬಾಹ್ಯಾಕಾಶದಲ್ಲಿನ ಎಕ್ಸ್‌–ರೇ ಮೂಲಗಳ ವರ್ತನೆಯ ಕುರಿತು ಅಧ್ಯಯನ ನಡೆಸುವ ಉದ್ದೇಶವನ್ನೂ ಹೊಂದಿದೆ. ಇಂತಹ ಸಂಶೋಧನೆಗೆ ಇಸ್ರೊ ಹಾರಿಬಿಟ್ಟಿರುವ ಮೊದಲ ಉಪಗ್ರಹ ಇದು. ಈ ಬಗೆಯ ಸಂಶೋಧನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 2021ರ ಡಿಸೆಂಬರ್‌ನಲ್ಲಿ ಕೈಗೊಂಡಿತ್ತು.

ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು, ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು’ ಎನ್ನುತ್ತ ಸುದ್ದಿಗಾರರ ಜೊತೆ ಮಾತು ಆರಂಭಿಸಿದರು. ‘ಉಪಗ್ರಹದ ಸೌರಫಲಕ ಯಶಸ್ವಿಯಾಗಿ ಕಾರ್ಯಾರಂಭಿಸಿದೆ’ ಎಂದು ಸೋಮನಾಥ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಎಕ್ಸ್‌ಪೊಸ್ಯಾಟ್ ಉಪಗ್ರಹವು ಜಾಗತಿಕವಾಗಿ ಖಗೋಳ ವಿಜ್ಞಾನಿಗಳಿಗೆ ಹೆಚ್ಚಿನ ಪ್ರಯೋಜನ ತಂದುಕೊಡುವ ನಿರೀಕ್ಷೆ ಇದೆ. ಕಪ್ಪುರಂಧ್ರಗಳು, ನ್ಯೂಟ್ರಾನ್‌ ನಕ್ಷತ್ರಗಳ ಕುರಿತ ಅರಿವನ್ನು ಹೆಚ್ಚಿಸುವ ನಿರೀಕ್ಷೆಯನ್ನು ವಿಜ್ಞಾನಿಗಳು ಹೊಂದಿದ್ದಾರೆ. 

‘ಈ ಬಾರಿ ಉಡಾವಣಾ ವಾಹನದಲ್ಲಿ, ಮಹಿಳೆಯರೇ ಅಭಿವೃದ್ಧಿಪಡಿಸಿದ ಉಪಗ್ರಹವೊಂದು ಇರುವುದು ಹೆಚ್ಚು ಮಹತ್ವದ್ದು. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣವನ್ನು ತೋರಿಸುತ್ತಿದೆ. ಉಡಾವಣಾ ವಾಹನದಲ್ಲಿ ಇದ್ದ ಎಲ್ಲ ಉಪಗ್ರಹಗಳು, ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಪರಿವರ್ತನೆಗಳಿಗೆ ದ್ಯೋತಕವಾಗಿವೆ’ ಎಂದು ಯೋಜನಾ ನಿರ್ದೇಶಕ ಎಂ. ಜಯಕುಮಾರ್ ಹೇಳಿದರು.

ಕೇರಳದ ತಿರುವನಂತಪುರದ ಎಲ್‌ಬಿಎಸ್‌ ಮಹಿಳೆಯರ ತಾಂತ್ರಿಕ ಸಂಸ್ಥೆಯ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಉಪಗ್ರಹವು ಈ ಬಾರಿ ಉಡಾವಣಾ ವಾಹನದಲ್ಲಿ ಇತ್ತು.

‘ಇಸ್ರೊ ಜೊತೆ ಸಮನ್ವಯದಿಂದ ಈ ಎಂಜಿನಿಯರ್‌ಗಳು ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಇಸ್ರೊ ಪಾಲಿಗೆ ಮಾತ್ರವೇ ಸ್ಫೂರ್ತಿ ನೀಡುವಂಥದ್ದಲ್ಲ. ಬದಲಿಗೆ, ಇದು ಇಡೀ ದೇಶಕ್ಕೆ ಸ್ಫೂರ್ತಿ. ಹೆಣ್ಣುಮಕ್ಕಳು ವಿಜ್ಞಾನದ ಅಧ್ಯಯನಕ್ಕೆ ಸಮಯ ನೀಡಿ, ತಮ್ಮ ಇಷ್ಟದ ಕ್ಷೇತ್ರದಲ್ಲಿ ಮುಂದೆ ಬಂದಾದ ನಾವು ಅದನ್ನು ಪ್ರಶಂಸಿಸುವ ಕೆಲಸ ಮಾಡಬೇಕು’ ಎಂದು ಸೋಮನಾಥ್ ಹೇಳಿದರು.

  • ಬ್ರಹ್ಮಾಂಡದ 50 ಸಂಭಾವ್ಯ ಮೂಲಗಳಿಂದ ಹೊರ ಹೊಮ್ಮುವ ಮತ್ತು ಧ್ರುವೀಕರಣಗೊಳ್ಳುವ ಕ್ಷಕಿರಣಗಳ ಅಧ್ಯಯನ

  • 469 ಕೆ.ಜಿ ತೂಕದ ಈ ಉಪಗ್ರಹದ ಕಾರ್ಯಾವಧಿ 5 ವರ್ಷಗಳು

  • ಬಾಹ್ಯಾಕಾಶದಲ್ಲಿ ಮೂರನೇ ಅಧ್ಯಯನದ ಯೋಜನೆ

ರಾಮನ್‌ ಸಂಸ್ಥೆಯ ನಂಟು

ಸೂಪರ್‌ನೋವಾ ಅಂದರೆ ನಕ್ಷತ್ರವೊಂದು ಸಿಡಿಯುವ ಹಂತ. ಆ ನಕ್ಷತ್ರ ಸಿಡಿದ ಬಳಿಕ ಉಳಿಯುವ ತಿರುಳಿನಿಂದ ಒಂದೋ ಕಪ್ಪು ರಂಧ್ರ, ಇಲ್ಲವೇ ನ್ಯೂಟ್ರಾನ್‌ ನಕ್ಷತ್ರ ಸೃಷ್ಟಿಯಾಗುತ್ತದೆ. ಈ ಖಗೋಳ ವಿದ್ಯಮಾನಗಳನ್ನು ಅಧ್ಯಯನ ಮಾಡು ವುದೇ ಭಾರತದ ಗುರಿ. ರಾಮನ್‌ ಸಂಶೋಧನಾ ಸಂಸ್ಥೆ ಇದರ ಅಧ್ಯಯನಕ್ಕಾಗಿ ಎಕ್ಸ್‌–ರೇ ಪೋಲಾರಿಮೆಟ್ರಿ ಉಪಗ್ರಹವನ್ನು ಅಭಿವೃದ್ಧಿಪಡಿಸಿದೆ.

ಅಮೆರಿಕಾದ ನಾಸಾ ಹೊರತುಪಡಿಸಿದರೆ ಬೇರೆ ಯಾವುದೇ ದೇಶ ಈ ಸಾಹಸಕ್ಕೆ ಕೈಹಾಕಿಲ್ಲ. ಚಂದ್ರಯಾನ–3, ಆದಿತ್ಯ ಎಲ್‌–1 ಬಳಿಕ ಇದು (ಎಕ್ಸ್‌ಪೊಸ್ಯಾಟ್‌) ಮೂರನೇ ಖಗೋಳ ವಿಜ್ಞಾನ ಅಧ್ಯಯನ ಯೋಜನೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ನಡೆದಿದೆ ಎಂದು ಇಸ್ರೊ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಶಸ್ವಿ ಉಡಾವಣೆಯ 3 ಹಂತಗಳು

1. ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಉಡಾವಣಾ ವಾಹನವು 21 ನಿಮಿಷಗಳಲ್ಲಿ ಭೂಮಿಯಿಂದ 650 ಕಿ.ಮೀ. ಎತ್ತರದ ನಿಗದಿತ ಕಕ್ಷೆಗೆ ಎಕ್ಸ್‌ಪೊಸ್ಯಾಟ್‌ ಉಪಗ್ರಹವನ್ನು ಸೇರಿಸಿತು

2. ಆ ಬಳಿಕ ನಭದಲ್ಲೇ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಉದ್ದೇಶದ ಮತ್ತೊಂದು ಉಪಗ್ರಹವನ್ನು ಅಲ್ಲಿಂದ ಕೆಳಕ್ಕೆ ಅಂದರೆ, ಭೂಮಿಯಿಂದ 350 ಕಿ.ಮೀ ಎತ್ತರದ ಕಕ್ಷೆಯಲ್ಲಿ ನೆಲೆಗೊಳಿಸಿತು

3. ಅತ್ಯಂತ ಸಂಕೀರ್ಣ ಎನಿಸಿರುವ ಈ ಪ್ರಡಕ್ರಿಯೆಯ ಮೂಲಕ ಉಡಾವಣಾ ವಾಹನದ ನಾಲ್ಕನೇ ಹಂತವನ್ನು ಚಾಲನೆಗೊಳಿಸಿ, ಬಳಿಕ ಕೆಳ ಹಂತದ ಕಕ್ಷೆಗೆ ಇಳಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT