ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈಲಿನಲ್ಲಿದ್ದೇ ರಶೀದ್ ಗೆಲುವು: ಬದಲಾದಿತೇ ಕಾಶ್ಮೀರದ ಪ್ರಚಾರತಂತ್ರ

Published 6 ಜೂನ್ 2024, 15:31 IST
Last Updated 6 ಜೂನ್ 2024, 15:31 IST
ಅಕ್ಷರ ಗಾತ್ರ

ಶ್ರೀನಗರ: ಪಕ್ಷೇತರ ಅಭ್ಯರ್ಥಿ ಶೇಖ್‌ ಅಬ್ದುಲ್‌ ರಶೀದ್ ಅವರು ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಿ ಜೈಲಿನಲ್ಲಿದ್ದೇ ಸಾಧಿಸಿರುವ ಗೆಲುವು, ಜಮ್ಮು ಕಾಶ್ಮಿರದ ರಾಜಕೀಯ ವಲಯದಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ.  ಫಲಿತಾಂಶವು ಈ ವಲಯದ ಚುನಾವಣಾ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೂ ನಾಂದಿಯಾಗಿದೆ.  

ಕಾಶ್ಮೀರದ ರಾಜಕಾರಣದಲ್ಲಿ ರಶೀದ್ ಅತಿ ವಿವಾದಿತ ಹೆಸರು.  ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ (ಯುಎಪಿಎ) ಅನ್ವಯ ಬಂಧಿತರಾಗಿರುವ ರಶೀದ್‌, ಸದ್ಯ ತಿಹಾರ್‌ ಜೈಲಿನಲ್ಲಿದ್ದಾರೆ.

ಪ್ರತ್ಯೇಕತಾವಾದದ ಹೇಳಿಕೆಗಳಿದ್ದ ಸೂಕ್ಷ್ಮ, ಭಾವನಾತ್ಮಕ ಮಾತುಗಳಿಂದಲೇ ಪ್ರಚಾರ ನಡೆದಿತ್ತು. ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಭಾವನೆ ಗಟ್ಟಿಯಾಗಿರುವ  ವರ್ಗವನ್ನೇ ಗುರಿಯಾಗಿಸಿ ಪ್ರಚಾರ ನಡೆಸಿದ್ದರು.

ಇವರ ಸ್ಪರ್ಧೆಗೆ ಮತದಾರರಿಂದ ದೊರೆತಿರುವ ಮನ್ನಣೆಯು ಸದ್ಯದಲ್ಲಿ ಕಾಶ್ಮೀರದಲ್ಲಿ ಕೇಳಿಬರುತ್ತಿರುವ ಪ್ರತ್ಯೇಕತಾವಾದ ಕುರಿತ ಮೃದು ಪ್ರತಿಪಾದನೆಗೆ ಹೆಚ್ಚುತ್ತಿರುವ ಜನಬೆಂಬಲ ಎಂದೇ ವಿಶ್ಲೇಷಿಸಲಾಗಿದೆ.

ಈ ಅಂಶವೇ ವಿಧಾನಸಭೆಗೆ ಮುಂದೆ ಚುನಾವಣೆಯ ಪ್ರಚಾರದ ಕೇಂದ್ರ ಬಿಂದುವಾಗುವ ಸಾಧ್ಯತೆಗಳಿವೆ. ಪ್ರಚಾರ ತಂತ್ರ ಕುರಿತು ಸದ್ಯ ಸ್ಥಳೀಯ ಪ್ರಮುಖ ಪಕ್ಷಗಳಾದ ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್‌ ಡೆಮಾಕ್ರಾಟಿಕ್ ಪಾರ್ಟಿ (ಪಿಡಿಪಿ) ಕವಲುದಾರಿಯಲ್ಲಿವೆ. ಚುನಾವಣಾ ಕಾರ್ಯತಂತ್ರ ಮರುಚಿಂತಿಸುವ ಹಂತದಲ್ಲಿವೆ.

ರಶೀದ್‌ ಗೆಲುವು ಎನ್‌ಸಿ ಮತ್ತು ಪಿಡಿಪಿಗೂ ಇಂತದೇ ಪ್ರಚಾರ ತಂತ್ರ ಅಳವಡಿ‌ಸಿಕೊಳ್ಳಲು ಪ್ರೇರೇಪಣೆಯಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸಾರ್ವಜನಿಕ ಭಾವನೆಗಳನ್ನು ಬೆಂಬಲವಾಗಿಸಿ ಪರಿವರ್ತಿಸಿಕೊಳ್ಳಲು ಮುಖ್ಯ ವಾಹಿನಿಯ ಎರಡೂ ಪಕ್ಷಗಳು ಇದೇ ಹಾದಿ ತುಳಿಯಬಹುದು ಎಂದು ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ಜಫಾರ್ ಚೌಧುರಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ರಶೀದ್‌ ಅವರ ಚುನಾವಣಾ ಪ್ರಚಾರದಲ್ಲಿ ಪ್ರತ್ಯೇಕತಾವಾದ ಭಾವನೆ ಚಿಗುರುತ್ತಿರುವುದು ಗೋಚರಿಸಿತ್ತು. ಭಯೋತ್ಪಾದನೆ ಆರೋಪದಡಿ ಜೈಲಿನಲ್ಲಿರುವ ರಶೀದ್‌ ಪ್ರಭಾವಿ ರಾಜಕಾರಣಿ ಒಮರ್ ಅಬ್ದುಲ್ಲಾ ವಿರುದ್ಧ ಜಯಗಳಿಸಿದರು. ಈ ಬೆಳವಣಿಗೆ ಎನ್‌ಸಿ ಮತ್ತು ಪಿಡಿಪಿಗಳಲ್ಲಿ ಆತಂಕ ಹುಟ್ಟುಹಾಕಿದೆ. ಹೀಗಾಗಿ, ಇದೇ ಪ್ರಚಾರ ಶೈಲಿಯನ್ನು ಭವಿಷ್ಯದಲ್ಲಿ ಈ ಪಕ್ಷಗಳು ಅನುಸರಿಸುವ ಸಾಧ್ಯತೆಗಳಿವೆ’ ಎಂದು ಅಭಿಪ್ರಾಯಪಟ್ಟರು.

ಹೆಸರು ಗೋಪ್ಯವಾಗಿಡಲು ಕೋರಿದ ಎನ್‌ಸಿ ಹಿರಿಯ ನಾಯಕರೊಬ್ಬರು, ‘ಫಲಿತಾಂಶದ ಮೂಲಕ ಜನರು ಏನೋ ಹೇಳುತ್ತಿದ್ದಾರೆ. ನಾವು ಬದಲಾವಣೆ ಗುರುತಿಸಿದ್ದೇವೆ’ ಎಂದರು.

‘ಹಿಂದಿನ ಸ್ಥಿತಿಗಳಿಂದ ಜನರಿಗೆ ಬಿಡುಗಡೆ ಬೇಕಿದೆ. ಈ ಭಾವನೆಗಳನ್ನು ಬಳಸಿಕೊಂಡ ರಶೀದ್, ತ್ವರಿತವಾಗಿ ಜನಪ್ರಿಯರಾದರು.ಇದನ್ನು ಆಲಿಸುವ, ಅನುಸರಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಅಪಾಯ ಅನಿವಾರ್ಯ‘ ಎಂದು ಹೇಳಿದರು. 

ಭಯೋತ್ಪಾದನೆ ಹತ್ತಿಕ್ಕುವ ಉದ್ದೇಶದ ಯುಎಪಿಎ ಕಾಯ್ದೆಯಡಿ ಬಂಧಿತರಾಗಿ ರಶೀದ್‌ ಜೈಲಿನಲ್ಲಿದ್ದಾರೆ. ಇದು, ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಈ ಫಲಿತಾಂಶವು ಈ ವಲಯದಲ್ಲಿನ ರಾಜಕೀಯ ಅಭಿವ್ಯಕ್ತಿ ಮತ್ತು ಭಿನ್ನಾಭಿಪ್ರಾಯಗಳಿಗೆ ಮುಖಾಮುಖಿ ಆಗುವ ಕೇಂದ್ರ ಸರ್ಕಾರದ ಧೋರಣೆ ಕುರಿತು ಇರುವ ಅಸಮಾಧಾನವನ್ನು ಒತ್ತಿಹೇಳಿದೆ.

ಮುಂದೆ ಕಾಶ್ಮೀರದಲ್ಲಿ ಚುನಾವಣಾ ಚಟುವಟಿಕೆಗಳು ಇನ್ನಷ್ಟು ಗರಿಗೆದರಲಿವೆ. ಫಲಿತಾಂಶವು ಭವಿಷ್ಯದ ಹಾದಿಗೂ ಹೊಸ ವ್ಯಾಖ್ಯಾನ ಬರೆಯಬಹುದು ಎನ್ನಲಾಗಿದೆ.

ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ನೆರವಾಗುವ ವಿಸ್ತೃತ ಚುನಾವಣಾ ವ್ಯವಸ್ಥೆ ಉಳಿಸಿ
ಕೊಂಡೇ, ಜಮ್ಮು ಮತ್ತು ಕಾಶ್ಮೀರದ ನಿರೀಕ್ಷೆ ಮತ್ತು ಅಸ್ಮಿತೆಗೆ ಆದ್ಯತೆ ನೀಡುವ ಭಿನ್ನವಾದ ಪ್ರತ್ಯೇಕತಾವಾದ ಬೇಡಿಕೆಗೆ ಎನ್‌ಸಿ ಮತ್ತು ಪಿಡಿಪಿ ಎರಡೂ ಒತ್ತು ನೀಡುವ ಸಾಧ್ಯತೆಗಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT