ಆರು ಜಿಲ್ಲೆಗಳ 25.78 ಲಕ್ಷ ಮತದಾರರು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಾಜಿ ಸ್ಪೀಕರ್ ಮುಬಾರಕ್ ಗುಲ್, ಜಮ್ಮು–ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಸೇರಿದಂತೆ 239 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಪಿಡಿಪಿಯ ಮಾಜಿ ಸಚಿವರಾದ ಆಸಿಯಾ ನಕಾಶ್, ಗುಲಾಂ ನಬಿ ಹಂಜೂರಾ, ಜೈಲಿನಲ್ಲಿರುವ ಪ್ರತ್ಯೇಕ ತಾವಾದಿ ನಾಯಕ ಸರ್ಜನ್ ಅಹ್ಮದ್ ವಾಗೇ, ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ, ಮಾಜಿ ಸಚಿವರಾದ ಅಲಿ ಮೊಹಮ್ಮದ್ ಸಾಗರ್ ಸಹ ಚುನಾವಣಾ ಅಖಾಡದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ನಗರ ಪ್ರದೇಶದಲ್ಲಿ 1,056 ಹಾಗೂ ಗ್ರಾಮೀಣ ಪ್ರದೇಶದಲ್ಲಿ 2,446 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪಾರದರ್ಶಕತೆಯ ಖಚಿತತೆಗಾಗಿ ಎಲ್ಲ ಮತಗಟ್ಟೆಗಳು ವೆಬ್‌ಕಾಸ್ಟಿಂಗ್ ಸೌಲಭ್ಯ ಹೊಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಿ ವಾಹನಗಳ ಮೇಲೆ ಕಣ್ಗಾವಲಿಡಲಾಗಿದೆ.
ಸೆ. 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 61.38ರಷ್ಟು ಮತದಾನವಾಗಿತ್ತು. ಮೂರನೇ ಹಂತದ ಮತದಾನವು ಅಕ್ಟೋಬರ್ 1ರಂದು ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಅರ್ಹ ಮತದಾರರು ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಮ್ಮ ಪಾತ್ರವನ್ನು ನಿಭಾಯಿಸಬೇಕು ಎಂದು ಕರೆ ಮಾಡಿದ್ದಾರೆ.
ಭಯೋತ್ಪಾದನೆ ಮುಕ್ತ, ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರದ ನಿರ್ಮಾಣಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಬದಲಾವಣೆಯ ಹೊಸ್ತಿಲಲ್ಲಿದೆ. ಇಂದು 26 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಜಮ್ಮು-ಕಾಶ್ಮೀರದ ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮನವಿ ಮಾಡಿದ್ದಾರೆ