ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾರ್ಖಂಡ್‌ | JMM ವಿರುದ್ಧ ಸಿಡಿದ ಚಂಪೈ ಸೊರೇನ್‌; ಹೊಸ ಪಕ್ಷ ಸ್ಥಾಪನೆ ಘೋಷಣೆ

Published 21 ಆಗಸ್ಟ್ 2024, 12:56 IST
Last Updated 21 ಆಗಸ್ಟ್ 2024, 12:56 IST
ಅಕ್ಷರ ಗಾತ್ರ

ನವದೆಹಲಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಜಾರ್ಖಂಡ್‌ ಮುಕ್ತಿ ಮೋರ್ಚಾದಿಂದ (ಜೆಎಂಎಂ) ಹೊರಬಂದು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಜತೆಗೆ, ಇತರೆ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಎದುರು ನಿವೃತ್ತಿ, ಸಂಘಟನೆ, ಸ್ನೇಹ ಎಂಬ ಮೂರು ಆಯ್ಕೆಗಳಿವೆ. ಆದರೆ, ನಾನು ನಿವೃತ್ತಿಯಾಗುವುದಿಲ್ಲ. ಬದಲಾಗಿ ಹೊಸ ಪಕ್ಷವನ್ನು ಸ್ಥಾಪಿಸಿ, ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಹಾಗೆಯೇ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಹೊಸ ಪಕ್ಷ ಸ್ಥಾಪನೆ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ನಿಮ್ಮ ಸಮಸ್ಯೆ ಅಲ್ಲ’ ಎಂದಷ್ಟೇ ಹೇಳಿದ್ದಾರೆ.

‘ಒಂದು ವಾರದೊಳಗೆ ಹೊಸ ಪಕ್ಷವನ್ನು ಸ್ಥಾಪಿಸಲಾಗುವುದು. ಒಂದು ದಿನದೊಳಗೆ 30 ಸಾವಿರದಿಂದ 40 ಸಾವಿರ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಬಹುದು. ಹಾಗಾಗಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದರಿಂದ ನನಗೆ ಯಾವ ಸಮಸ್ಯೆಯೂ ಇಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಸಾಕಷ್ಟು ಅವಮಾನ ಎದುರಿಸಿದೆ’ ಎಂದು ಈಚೆಗೆ ಚಂಪೈ ಸೊರೇನ್‌ ಹೇಳಿದ್ದರು. ತಾನು ಸಿ.ಎಂ. ಆಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಪಕ್ಷದ ಹೈಕಮಾಂಡ್‌ ರದ್ದುಗೊಳಿಸಿದೆ ಎಂದು ಅವರು ದೂರಿದ್ದರು. ‘ಮುಖ್ಯಮಂತ್ರಿಯೊಬ್ಬರು ಜಾರಿಗೊಳಿಸಿದ ಯೋಜನೆಗಳನ್ನು ಮತ್ತೊಬ್ಬರು ರದ್ದುಗೊಳಿಸುವುದಕ್ಕಿಂತ ಹೆಚ್ಚು ಅವಮಾನ ಪ್ರಜಾಪ್ರಭುತ್ವದಲ್ಲಿ ಬೇರೇನಿದೆ’ ಎಂದು ಪ್ರಶ್ನಿಸಿದ್ದರು.

ಈಚೆಗೆ ಚಂಪೈ ಸೊರೇನ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.

ಬಿಜೆಪಿಯು ನಮ್ಮ ಶಾಸಕರನ್ನು ‘ಖರೀದಿ’ಸುವ ಮತ್ತು ಸಮಾಜದಲ್ಲಿ ಒಡಕು ಉಂಟುಮಾಡುವ ಕೆಲಸದಲ್ಲಿ ನಿರತವಾಗಿದೆ ಎಂದು ಅವರು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT