ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಂ.ಜೋಸೆಫ್‌, ಇಂದಿರಾ ಬ್ಯಾನರ್ಜಿ, ವಿನೀತ್‌ ಶರಣ್‌ ಅಧಿಕಾರ ಸ್ವೀಕಾರ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ
Last Updated 7 ಆಗಸ್ಟ್ 2018, 6:14 IST
ಅಕ್ಷರ ಗಾತ್ರ

ನವದೆಹಲಿ:ಉತ್ತರಾಖಂಡ, ಮದ್ರಾಸ್‌ ಮತ್ತು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಇಂದಿರಾ ಬ್ಯಾನರ್ಜಿ ಮತ್ತು ವಿನೀತ್ ಶರಣ್ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಈ ಮೂವರ ನೇಮಕ ಮಾಡಿರುವ ಆದೇಶ ಪತ್ರಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ಸಹಿ ಹಾಕಿದ್ದರು.

ಈ ನೇಮಕದಿಂದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 25ಕ್ಕೆ ಏರಿದ್ದು, ಇನ್ನೂ ಆರು ಹುದ್ದೆಗಳು ಖಾಲಿ ಉಳಿದಿವೆ.

ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೀತಾ ಮಿತ್ತಲ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.

ಸರ್ಕಾರ–ಕೊಲಿಜಿಯಂ ಜಟಾಪಟಿ
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಅವರನ್ನು ನೇಮಕ ಮಾಡುವಂತೆ ಕೊಲಿಜಿಯಂ ಕಳುಹಿಸಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತ್ತು. ಆದರೆ ಅದೇ ಶಿಫಾರಸಿನಲ್ಲಿ ಹೆಸರಿಸಲಾಗಿದ್ದ ವಕೀಲೆ ಇಂದೂ ಮಲ್ಹೋತ್ರಾ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಇದು ನ್ಯಾಯಾಂಗ ಮತ್ತು ಸರ್ಕಾರದ ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು.

‘ಜೋಸೆಫ್ ಅವರ ಸೇವಾ ಹಿರಿತನ ಕಡಿಮೆ ಇದೆ. ಹೀಗಾಗಿ ಅವರನ್ನು ನೇಮಕ ಮಾಡಲಾಗದು. ಜತೆಗೆ ಅವರು ಕೇರಳದವರಾಗಿದ್ದು, ಈಗಾಗಲೇ ಕೇರಳದವರೇ ಆದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಸುಪ್ರೀಂ ಕೋರ್ಟ್‌ನಲ್ಲಿ ಸೇವೆಯಲ್ಲಿದ್ದಾರೆ. ಈಗ ಕೆ.ಎಂ.ಜೋಸೆಫ್ ಅವರನ್ನೂ ನೇಮಕ ಮಾಡಿದರೆ ಅದು ಪ್ರಾದೆಶಿಕ ಅಸಮಾನತೆಯಾಗುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯವೇ ಇಲ್ಲದ ರಾಜ್ಯಗಳಿಂದ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡಿ. ಈ ಶಿಫಾರಸನ್ನು ಮರುಪರಿಶೀಲಿಸಿ’ ಎಂದು ಸರ್ಕಾರ ಸೂಚಿಸಿತ್ತು.

ಸರ್ಕಾರದ ಈ ನಿಲುವಿಗೆ ನ್ಯಾಯಾಂಗ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಕಾಂಗ್ರೆಸ್‌ನ ಹರೀಶ್‌ ರಾವತ್‌ ನೇತೃತ್ವದ ಉತ್ತರಾಖಂಡ ಸರ್ಕಾರವನ್ನು ವಜಾ ಮಾಡಿ 2016ರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಈ ನಿರ್ಧಾರವನ್ನು ನ್ಯಾಯಮೂರ್ತಿ ಜೋಸೆಫ್‌ ರದ್ದು ಮಾಡಿದ್ದರು. ಜೋಸೆಫ್‌ ಅವರ ಹೆಸರನ್ನು ಮರುಪರಿಶೀಲಿಸುವಂತೆ ಕೇಂದ್ರ ಕೋರಲು ಇದುವೇ ಕಾರಣ ಎಂದು ನ್ಯಾಯಾಂಗ ಕ್ಷೇತ್ರದ ಹಲವರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT