ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾ

Published : 9 ನವೆಂಬರ್ 2023, 11:39 IST
Last Updated : 9 ನವೆಂಬರ್ 2023, 11:39 IST
ಫಾಲೋ ಮಾಡಿ
Comments

ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರ (ಮೇಲ್‌ಶಾಂತಿ) ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಮತ್ತು ಜಿ. ಗಿರೀಶ್ ಅವರಿದ್ದ ನ್ಯಾಯಪೀಠವು ಅರ್ಜಿದಾರರ ವಾದ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ದಾಖಲಿಸಿರುವ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿ ಅರ್ಜಿ ತಿರಸ್ಕರಿಸಿದೆ. ‘ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕಾರಣಗಳು ಕಾಣುತ್ತಿಲ್ಲ’ ಎಂದು ವಿಭಾಗೀಯ ಪೀಠ ಹೇಳಿದೆ.

2023–24ನೆಯ ಸಾಲಿಗೆ ಮಹೇಶ್ ಪಿ.ಎನ್. ಅವರನ್ನು ದೇವಸ್ಥಾನದ ಮೇಲ್‌ಶಾಂತಿ ಆಗಿ ಆಯ್ಕೆ ಮಾಡಿದ್ದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಅಯ್ಯಪ್ಪ ಸ್ವಾಮಿಯ ಭಕ್ತ ಎಂದು ಹೇಳಿಕೊಂಡಿರುವ ಮಧುಸೂದನನ್ ನಂಬೂದಿರಿ ಎನ್ನುವವರು ಈ ಅರ್ಜಿ ಸಲ್ಲಿಸಿದ್ದರು. ಆಯ್ಕೆ ಪ್ರಕ್ರಿಯೆಯನ್ನು ಹೊಸದಾಗಿ ನಡೆಸುವಂತೆ ಸೂಚಿಸಬೇಕು ಎಂದು ಕೂಡ ಅವರು ಕೋರಿದ್ದರು.

ಮಹೇಶ್ ಅವರ ಹೆಸರು ಇದ್ದ ಚೀಟಿಯನ್ನು ಮಡಚಿದ ಶಬರಿಮಲೆಯ ವಿಶೇಷ ಆಯುಕ್ತರು, ಅದನ್ನು ಒಂದು ಬೆಳ್ಳಿ ಪಾತ್ರೆಗೆ ಹಾಕುವ ಮೊದಲು ತಮ್ಮ ಎರಡೂ ಹಸ್ತ ಬಳಸಿ ಸುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದರು. 

ಪಾತ್ರೆಯನ್ನು ಕುಲುಕುವ ಸಂದರ್ಭದಲ್ಲಿ, ಸರಿಯಾಗಿ ಸುತ್ತಿಲ್ಲದ ಚೀಟಿಗಳು ಮೇಲಕ್ಕೆ ಬರುತ್ತವೆ. ಇದರಿಂದಾಗಿ ಚೀಟಿ ಎತ್ತುವ ಮಗು ಸುರುಳಿ ಸುತ್ತಿಲ್ಲದ ಚೀಟಿಯನ್ನೇ ಮೊದಲು ಎತ್ತುವ ಸಂದರ್ಭ ಸೃಷ್ಟಿಯಾಗುತ್ತದೆ ಎಂದು ಅವರು ವಾದಿಸಿದ್ದರು. ಇದರಿಂದಾಗಿ ಮಹೇಶ್ ಅವರು ಮೇಲ್‌ಶಾಂತಿ ಆಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದರು.

ಶಬರಿಮಲೆಯ ವಿಶೇಷ ಆಯುಕ್ತರ ಪರವಾಗಿ ಹಾಜರಿದ್ದ ಅಮಿಕಸ್ ಕ್ಯೂರಿ ಅವರು, ಬೆಳ್ಳಿ ಪಾತ್ರೆಗಳನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ತಂತ್ರಿಗಳು ಸರಿಯಾಗಿ ಕುಲುಕಿದ್ದಾರೆ ಎಂದು ವಿವರಿಸಿದರು. ಪಂದಲ ರಾಜಕುಟುಂಬದವರು ನಿಯೋಜಿಸಿದ್ದ ಪುಟ್ಟ ಮಗುವೊಂದು ಚೀಟಿಯನ್ನು ಎತ್ತುವ ಕೆಲಸ ಮಾಡಿದೆ ಎಂಬ ಮಾಹಿತಿ ನೀಡಿದರು.

‘ದೃಶ್ಯಾವಳಿಯಲ್ಲಿ ಇರುವ ಪ್ರಕಾರ, ಪಾತ್ರೆಗಳನ್ನು ಗರ್ಭಗುಡಿಯಲ್ಲಿ ಸರಿಯಾಗಿ ಕುಲುಕಿರುವ ಕಾರಣ ಅರ್ಜಿಯಲ್ಲಿ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರ ಇಲ್ಲ’ ಎಂದು ಅಮಿಕಸ್ ಕ್ಯೂರಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT