ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ | ವೈದ್ಯರು ಕೆಲಸಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ: ಸುಪ್ರೀಂ ಕೋರ್ಟ್

Published : 9 ಸೆಪ್ಟೆಂಬರ್ 2024, 10:22 IST
Last Updated : 9 ಸೆಪ್ಟೆಂಬರ್ 2024, 10:22 IST
ಫಾಲೋ ಮಾಡಿ
Comments

ನವದೆಹಲಿ: ಕೋಲ್ಕತ್ತದ ಆರ್.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಮಂಗಳವಾರ ಸಂಜೆ 5ರ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. 

‘ವೈದ್ಯರು ಮಂಗಳವಾರ ಸಂಜೆ 5ರ ಒಳಗಾಗಿ ಕರ್ತವ್ಯಕ್ಕೆ ಮರಳಿದರೆ, ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಕೆಲಸಕ್ಕೆ ಗೈರುಹಾಜರಾದರೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಸೋಮವಾರ ಎಚ್ಚರಿಕೆ ನೀಡಿತು. 

ವೈದ್ಯರು ಕಳೆದ ಒಂದು ತಿಂಗಳಿ ನಿಂದ ಮುಷ್ಕರ ನಡೆಸುತ್ತಿರುವುದರಿಂದ ಪಶ್ಚಿಮ ಬಂಗಾಳದಾದ್ಯಂತ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ತೃಣಮೂಲ ಕಾಂಗ್ರೆಸ್‌ ಸರ್ಕಾರ ಸ್ವಾಗತಿಸಿದೆ. 

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡಿರುವ ಪೀಠ, ಅತ್ಯಾಚಾರ ಮತ್ತು ಹತ್ಯೆ ಕುರಿತು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಪ್ರಕರಣದ ವಿಚಾರಣೆ ಮುಂದುವರಿಸಿತು.

ಸರ್ಕಾರ ಆತ್ಮವಿಶ್ವಾಸ ತುಂಬಲಿ:  ‘ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ವೈದ್ಯ ರಲ್ಲಿರುವ ಭಯವನ್ನು ದೂರ ಮಾಡಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಪಶ್ಚಿಮ ಬಂಗಾಳ ಸರ್ಕಾರ ಮಾಡಬೇಕು. ವೈದ್ಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು, ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಬೇಕು’ ಎಂದು ಪೀಠವು ಹೇಳಿತು.

‘ಕೆಲಸವನ್ನು ನಿಲ್ಲಿಸಿ ಯಾವುದೇ ರೀತಿಯ ಪ್ರತಿಭಟನೆ ಮಾಡಬಾರದು. ಯುವ ವೈದ್ಯರು ಕರ್ತವ್ಯಕ್ಕೆ ಹಿಂತಿರುಗಿ ರೋಗಿಗಳ ಆರೈಕೆ ಮಾಡಬೇಕು. ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ನಿಮ್ಮ ಸುರಕ್ಷತೆ ಖಾತರಿಪಡಿಸುವರು’ ಎಂದಿತು.

ಮಹತ್ವದ ದಾಖಲೆ ಅಲಭ್ಯ– ಸುಪ್ರೀಂ ಕಳವಳ: ಹತ್ಯೆಗೀಡಾದ ವೈದ್ಯ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಅಗತ್ಯ ದಾಖಲೆ ಯೊಂದು ಲಭ್ಯವಿಲ್ಲದ್ದಕ್ಕೆ ಸುಪ್ರಿಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು, ಆ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ. 

‘ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಸ್ತಾಂತರಿಸಿದ್ದಕ್ಕೆ ದಾಖಲೆಯಾಗಿರುವ ಚಲನ್ ಎಲ್ಲಿದೆ’ ಎಂದು ಕೇಳಿದ ಪೀಠ, ಈ ಬಗ್ಗೆ ಉತ್ತರಿಸುವಂತೆ ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿತು. 

ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ‘ಚಲನ್ ನಮ್ಮ ದಾಖಲೆಗಳ ಭಾಗವಾಗಿಲ್ಲ’ ಎಂದು ಪೀಠಕ್ಕೆ ತಿಳಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್ ಅವರು, ತಕ್ಷಣವೇ ದಾಖಲೆಯನ್ನು ಹುಡುಕಲು ಸಾಧ್ಯವಾಗಲಿಲ್ಲ ಮತ್ತು ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ 17ಕ್ಕೆ ನಿಗದಿಪಡಿಸಿದೆ.

‘17ರೊಳಗೆ ವಸ್ತು ಸ್ಥಿತಿ ವರದಿ ಸಲ್ಲಿಸಿ’

  • ಪ್ರಕರಣದ ತನಿಖೆಯ ಕುರಿತು ಸೆಪ್ಟೆಂಬರ್‌ 17ರ ಒಳಗೆ ವಸ್ತು ಸ್ಥಿತಿ ವರದಿ ಸಲ್ಲಿಸುವಂತೆ ಪೀಠವು ಸಿಬಿಐಗೆ ನಿರ್ದೇಶಿಸಿತು. 

  • ‘ಸಿಬಿಐ ಈಗಾಗಲೇ ಒಂದು ವಸ್ತು ಸ್ಥಿತಿ ವರದಿಯನ್ನು ಸಲ್ಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂಬುದು ತಿಳಿಯುತ್ತದೆ. ಹೊಸದಾಗಿ ವಸ್ತು ಸ್ಥಿತಿ ವರದಿ ಸಲ್ಲಿಸಲು ಸಿಬಿಐಗೆ ನಿರ್ದೇಶನ ನೀಡುತ್ತೇವೆ’ ಎಂದಿತು.

  • ಎಫ್‌ಐಆರ್‌ ದಾಖಲು ಮಾಡಿಕೊಳ್ಳುವಲ್ಲಿ 14 ತಾಸುಗಳ ವಿಳಂಬ ಆಗಿದ್ದಕ್ಕೆ, ಪೀಠವು ಕೋಲ್ಕತ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.

  • ಸಂತ್ರಸ್ತೆಯ ಭಾವಚಿತ್ರವನ್ನು ಎಲ್ಲ ಸಾಮಾಜಿಕ ಮಾಧ್ಯಮಗಳಿಂದಲೂ ತೆಗೆದುಹಾಕುವಂತೆ ನಿರ್ದೇಶಿಸಿತು.

  • ಆರ್‌.ಜಿ ಕರ್ ಆಸ್ಪತ್ರೆಗೆ ಭದ್ರತೆ ಒದಗಿಸಲು ನಿಯೋಜಿಸಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮೂರು ತುಕಡಿಗಳಿಗೂ ವಸತಿ ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಿಕೊಡುವಂತೆ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿದೆ.

  • ಬಂಗಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಿಬಿಐ, ಮಾದರಿ ಗಳನ್ನು ಪರೀಕ್ಷೆಗಾಗಿ ಏಮ್ಸ್‌, ಇತರ ಸಿಎಫ್‌ಎಸ್‌ಎಲ್‌ಗಳಿಗೆ ಕಳುಹಿಸುವುದಾಗಿ ಹೇಳಿದೆ.

‘23 ಮಂದಿ ಸಾವು’
‘ವೈದ್ಯರು ಪ್ರತಿಭಟನೆ ಆರಂಭಿಸಿದ ಬಳಿಕ ಸೂಕ್ತ ಚಿಕಿತ್ಸೆ ಲಭಿಸದೆ ರಾಜ್ಯದಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯು ಸಲ್ಲಿಸಿರುವ ವಸ್ತು ಸ್ಥಿತಿ ವರದಿಯಲ್ಲಿ ಈ ಮಾಹಿತಿ ಇದೆ’ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್ ಪೀಠಕ್ಕೆ ತಿಳಿಸಿದರು. ವೈದ್ಯರ ಮುಷ್ಕರದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಆರೋಗ್ಯ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದರು.

ಕೇಂದ್ರದ ಪಿತೂರಿ: ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕೇಂದ್ರ ಸರ್ಕಾರದ ಪಿತೂರಿ ಇದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದಾರೆ.

‘ಇದು (ಆರ್‌.ಜಿ ಕರ್ ಘಟನೆಯ ನಂತರದ ಪ್ರತಿಭಟನೆ) ಖಂಡಿತವಾಗಿಯೂ ಕೇಂದ್ರ ಸರ್ಕಾರದ ಪಿತೂರಿ ಆಗಿದೆ ಮತ್ತು ಕೆಲವು ಎಡಪಕ್ಷಗಳೂ ಇದರಲ್ಲಿ ಭಾಗಿಯಾಗಿವೆ. ಕೆಲವರು ನೆರೆಯ ದೇಶದಲ್ಲಿ ತಲೆದೋರಿರುವ ಅರಾಜಕತೆಯ ಲಾಭವನ್ನು ಪಡೆಯುತ್ತಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ಪ್ರತ್ಯೇಕ ರಾಷ್ಟ್ರಗಳು ಎಂಬುದನ್ನು ಅವರು ಮರೆತಿದ್ದಾರೆ’ ಎಂದು ಟೀಕಿಸಿದರು.

‘ಮೃತ ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ನಾನು ಎಂದೂ ಹಣ ನೀಡಿಲ್ಲ. ನಿಮ್ಮ ಮಗಳ ನೆನಪಿಗಾಗಿ ಏನಾದರೂ ಮಾಡಲು ಬಯಸಿದರೆ, ಸರ್ಕಾರ ನೆರವು ನೀಡಲಿದೆ ಎಂದು ಸಂತ್ರಸ್ತೆಯ ಪೋಷಕರಿಗೆ ನಾನು ಹೇಳಿದ್ದೇನೆ. ಯಾವಾಗ ಏನನ್ನು ಮಾತನಾಡಬೇಕೆಂಬುದು ನನಗೆ ತಿಳಿದಿದೆ’ ಎಂದರು.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಲಭ್ಯವಿಲ್ಲ ಎಂದು ಪೀಠವು ಹೇಳಿದೆ. ಮಮತಾ ಬ್ಯಾನರ್ಜಿ ಕರಾಳ ಮುಖ ಸುಪ್ರೀಂ ಕೋರ್ಟ್‌ನಲ್ಲಿ ಅನಾವರಣಗೊಂಡಿದೆ.
–ಗೌರವ್‌ ಭಾಟಿಯಾ, ಬಿಜೆಪಿ ರಾಷ್ಟ್ರೀಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT