ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಅಧಿವೇಶನ | ಕಲಾಪಕ್ಕೆ ಮೋದಿ ಗೈರು; ಗದ್ದಲ ಜೋರು

Published 27 ಜುಲೈ 2023, 16:16 IST
Last Updated 27 ಜುಲೈ 2023, 16:16 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದ ಜನಾಂಗೀಯ ಹಿಂಸಾಚಾರ ಹಾಗೂ ಮುಂಗಾರು ಅಧಿವೇಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರುಹಾಜರಾಗಿರುವ ವಿಷಯವು ಸಂಸತ್‌ನ ಉಭಯ ಸದನಗಳಲ್ಲಿ ಗುರುವಾರ ಆಡಳಿತಾರೂಢ ಬಿಜೆಪಿ ಮತ್ತು ‘ಇಂಡಿಯಾ’ ಸದಸ್ಯರ ನಡುವೆ ಕೋಲಾಹಲ ಸೃಷ್ಟಿಸಿತು.

ಅಧಿವೇಶನ ಆರಂಭವಾದ ಆರನೇ ದಿನವೂ ಮಣಿಪುರ ಸಂಘರ್ಷವು ಸುಗಮ ಕಲಾಪಕ್ಕೆ ಸವಾಲಾಗಿ ಪರಿಣಮಿಸಿತು. ಗದ್ದಲ ಮುಂದುವರಿದ ಕಾರಣ ಎರಡೂ ಸದನಗಳ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಪ್ರತಿಪಕ್ಷಗಳ ಸದಸ್ಯರ ವಿರೋಧದ ನಡುವೆಯೇ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಿ ಧ್ವನಿಮತದ ಮೂಲಕ ಅಂಗೀಕಾರ ಪಡೆಯಿತು. 

ಕಲಾಪಕ್ಕೆ ಮೋದಿ ಗೈರು

ಪ್ರಧಾನಿ ಅವರು ಕಲಾಪಕ್ಕೆ ಗೈರುಹಾಜರಾಗಿದ್ದಾರೆ. ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಪಕ್ಷಗಳ ಸದಸ್ಯರು, ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಮಸೂದೆಗಳ ಪ್ರತಿಗಳನ್ನು ಹರಿದು ಸ್ಪೀಕರ್‌ ಪೀಠದತ್ತ ತೂರಿದರು. 

ವಿಪಕ್ಷಗಳ ಪ್ರತಿಭಟನೆಯಿಂದಾಗಿ ಸ್ಪೀಕರ್ ಓಂ ಬಿರ್ಲಾ ಅವರು, ಮೂರು ಬಾರಿ ಕಲಾಪ ಮುಂದೂಡಿದರು. ಮಧ್ಯಾಹ್ನ 3ಗಂಟೆಗೆ ಮತ್ತೆ ಶುರುವಾದಾಗ ಗದ್ದಲ ಮುಂದುವರಿದಿದ್ದರಿಂದ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು. ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ  ನಿರ್ಮಾಣವಾಯಿತು.  

ಕುಟುಕಿದ ಪೀಯೂಷ್‌

ಕೆಳಮನೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾದಾಗ ವಿಪಕ್ಷಗಳ ಸದಸ್ಯರು ಕಪ್ಪುಬಟ್ಟೆ ಧರಿಸಿ ಆಸೀನರಾಗಿದ್ದರು. ಕಪ್ಪುಹಣ, ಕಪ್ಪುಬಟ್ಟೆ ಮತ್ತು ಕಾಗೆಯು ಬಿಜೆಪಿ ಮತ್ತು ‘ಇಂಡಿಯಾ’ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ವಿರೋಧ ಪಕ್ಷಗಳ ಆಕ್ರೋಶಕ್ಕೆ 20 ನಿಮಿಷ ಕಾಲ ಕಲಾಪಕ್ಕೆ ಅಡ್ಡಿಯಾಯಿತು.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಕೈಗೊಂಡಿರುವ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಸದನದಲ್ಲಿ ಹೇಳಿಕೆ ನೀಡಲು ಮುಂದಾದರು. ಈ ವೇಳೆ ಪ್ರತಿಪಕ್ಷಗಳ ಸದಸ್ಯರು ‘ಇಂಡಿಯಾ...’ ‘ಇಂಡಿಯಾ...’ ಎಂದು ಘೋಷಣೆ ಕೂಗಿ ಅಡ್ಡಿಪಡಿಸಿದರು. 

ಬಳಿಕ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್ ಚೌಧರಿ ಅವರಿಗೆ ಮಾತನಾಡಲು ಸ್ಪೀಕರ್‌ ಅವಕಾಶ ನೀಡಿದರು. ಇದಕ್ಕೆ ಸಚಿವ ಪೀಯೂಷ್‌ ಗೋಯಲ್‌ ತೀವ್ರವಾಗಿ ಆಕ್ಷೇಪಿಸಿದರು. ಆಗ ಗದ್ದಲ ಜೋರಾಯಿತು. 

ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆಯ ಮಂಡನೆ ವೇಳೆ ಪೀಯೂಷ್‌ ಅವರು, ಕಪ್ಪುಬಟ್ಟೆ ಧರಿಸಿ ಬಂದಿದ್ದ ‘ಇಂಡಿಯಾ’ ಸದಸ್ಯರ ಕಾಲೆಳೆದರು. 

ಕಪ್ಪುಹಣದ ಲೂಟಿ ಮರೆಮಾಚಲು ಕಪ್ಪುಬಟ್ಟೆ ಧರಿಸಿಕೊಂಡು ಬಂದಿದ್ದಾರೆ. ಇದರಿಂದ ನಿಮಗೆ ಅಂಟಿರುವ ಕಳಂಕ ತೊಳೆಯಲು ಸಾಧ್ಯವಿಲ್ಲ ಎಂದು ಕುಟುಕಿದ ಅವರು, ಸಂಸತ್‌ ಭವನದ ಆವರಣದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಎಎಪಿ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರ ಮೇಲೆ ಕಾಗೆ ದಾಳಿ ನಡೆಸಿದ್ದ ಘಟನೆಯನ್ನೂ ಮಾತಿನ ನಡುವೆ ಎಳೆದು ತಂದರು.

‘ಕಾಗೆಗಳಿಗೂ ಕಪ್ಪುಬಟ್ಟೆಗಳು ಬಹುಬೇಗ ಆಕರ್ಷಿತವಾಗುತ್ತವೆ’ ಎಂದು ಸಂಸದರ ಹೆಸರು ಪ್ರಸ್ತಾಪಿಸದೆ ಪೀಯೂಷ್‌ ವ್ಯಂಗ್ಯವಾಡಿದರು. 

ಸಲಹೆ: ರಾಜ್ಯಸಭೆಯ ಕಲಾಪದಿಂದ ಅಮಾನತುಗೊಂಡಿರುವ ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರಿಗೆ ಅಹೋರಾತ್ರಿ ಧರಣಿ ನಡೆಸಬಾರದು. ಪ್ರತಿದಿನ ಕಲಾಪದ ಮುಗಿಯುವವರೆಗೂ ಮಾತ್ರವೇ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ

ಜನ ವಿಶ್ವಾಸ ಮಸೂದೆ ಅಂಗೀಕಾರ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರು ಲೋಕಸಭೆಯಲ್ಲಿ ಮಂಡಿಸಿದ ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಈ ಮಸೂದೆಯು ಯಾವುದೇ ಅಡೆತಡೆ ಇಲ್ಲದೆ ವ್ಯಾಪಾರಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಕೆಲವೊಮ್ಮೆ ಸಣ್ಣ ತಪ್ಪುಗಳಿಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ನ್ಯಾಯಾಲಯಗಳಿಗೂ ಅಲೆದಾಡಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸದೆ ದಂಡವಷ್ಟೇ ವಿಧಿಸಬೇಕು. ಜನರು ಮತ್ತು ಉದ್ಯಮಿಗಳ ನಡುವಿನ ನಂಬಿಕೆಯನ್ನು ಬಲಗೊಳಿಸುವುದೇ ಇದರ ಮೂಲ ಆಶಯ ಎಂದು ಸಚಿವರು ಹೇಳಿದರು.

ಸುಗ್ರೀವಾಜ್ಞೆ: ಕಲಾಪ ಸಮಿತಿ ಸಭೆಗೆ ಬಹಿಷ್ಕಾರ

ಸಭಾಪತಿ ಜಗದೀಪ್‌ ಧನಕರ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯಸಭೆಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸಿದರು. ದೆಹಲಿಯ ಸುಗ್ರೀವಾಜ್ಞೆಗೆ ಕಾಯ್ದೆ ರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಮಸೂದೆ ಮಂಡನೆಗಾಗಿ ಕಲಾಪ ಪಟ್ಟಿಗೆ ಸೇರಿಸುವ ಸಂಬಂಧ ಧನಕರ್‌ ಅವರು ಈ ಸಭೆ ಕರೆದಿದ್ದರು. 

ಕಾಂಗ್ರೆಸ್‌ನ ಜೈರಾಮ್‌ ರಮೇಶ್‌ ಎಲ್‌. ಹನುಮಂತಯ್ಯ ತೃಣಮೂಲ ಕಾಂಗ್ರೆಸ್‌ನ ಡೆರಿಕ್‌ ಒಬ್ರಿಯನ್ ಆರ್‌ಜೆಡಿಯ ಮಿಸಾ ಭಾರತಿ ಬಿಆರ್‌ಎಸ್‌ನ ಕೆ. ಕೇಶವರಾವ್‌ ಸಭೆಯಿಂದ ಹೊರಗುಳಿದಿದ್ದರು ಎಂದು ಮೂಲಗಳು ತಿಳಿಸಿವೆ.

ವೈಎಸ್‌ಆರ್‌ನ ವಿ. ವಿಜಯಸಾಯಿ ರೆಡ್ಡಿ ಬಿಜೆಡಿಯ ಸಸ್ಮಿತ್ ಪಾತ್ರ ಬಿಜೆಪಿಯ ಪ್ರಕಾಶ್‌ ಜಾವೇಡಕರ್ ಪಿ.ಟಿ. ಉಷಾ ಸಚಿವರಾದ ಪೀಯೂಷ್‌ ಗೋಯಲ್ ವಿ. ಮುರಳೀಧರನ್‌ ಸೇರಿದಂತೆ ಆಡಳಿತಾರೂಢ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ದೆಹಲಿ ಕೇಂದ್ರಾಡಳಿತ ಪ್ರದೇಶ (ತಿದ್ದುಪಡಿ) ಮಸೂದೆ 2023 ಅಸಂವಿಧಾನಿಕವಾಗಿದೆ ಎಂದು ‘ಇಂಡಿಯಾ’ ದೂರಿದೆ. ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೂ ದೆಹಲಿ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಲು ಸುಗ್ರೀವಾಜ್ಞೆಗೆ ಕಾಯ್ದೆ ರೂಪ ತರಲು ಹೊರಟಿರುವ ಕೇಂದ್ರದ ನಡೆಯು ಸಾಂವಿಧಾನಿಕವಾಗಿಲ್ಲ ಎಂದು ಆಪಾದಿಸಿದೆ. ಕಳೆದ ವಾರ ನಡೆದ ಸಮಿತಿಯ ಸಭೆಯನ್ನೂ ವಿರೋಧ ಪಕ್ಷಗಳ ಸದಸ್ಯರು ಬಹಿಷ್ಕರಿಸಿದ್ದರು. 

ರಾಜ್ಯಸಭೆಯಲ್ಲಿ ನಡೆದ ಕಲಾಪದಲ್ಲಿ ಕಪ್ಪುಬಟ್ಟೆ ಧರಿಸಿಕೊಂಡು ಬಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡರು –ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ನಡೆದ ಕಲಾಪದಲ್ಲಿ ಕಪ್ಪುಬಟ್ಟೆ ಧರಿಸಿಕೊಂಡು ಬಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡರು –ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಾತನಾಡಿದರು –ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಾತನಾಡಿದರು –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT