ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ರಾಜಮಂಡ್ರಿ (ಆಂಧ್ರಪ್ರದೇಶ)

Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಡಿ. ಪುರಂದೇಶ್ವರಿ (ಬಿಜೆಪಿ)

ಆಂಧ್ರಪ್ರದೇಶದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ರಾಜಮಂಡ್ರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವೆ ದಗ್ಗುಬಾಟಿ ಪುರಂದೇಶ್ವರಿ ಅವರನ್ನು ಸ್ಪರ್ಧೆಗಿಳಿಸಿದೆ. ಇವರು ಪಕ್ಷದ ಆಂಧ್ರಪ್ರದೇಶ ಘಟಕದ ಅಧ್ಯಕ್ಷೆ. ಪುರಂದೇಶ್ವರಿ ಅವರು 2004ರಲ್ಲಿ ಬಾಪಟ್ಲ ಕ್ಷೇತ್ರದಲ್ಲಿ ಹಾಗೂ 2009ರಲ್ಲಿ ವಿಶಾಖಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಸಂಸತ್‌ಗೆ ಆಯ್ಕೆಯಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವೆಯಾಗಿದ್ದರು. ಆಂಧ್ರಪ್ರದೇಶ ಇಬ್ಭಾಗವಾಗುವುದನ್ನು ವಿರೋಧಿಸಿ ಇವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. 2014ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಪುರಂದೇಶ್ವರಿ ಅವರು, ಅದೇ ವರ್ಷ ರಾಜಂಪೇಟ ಲೋಕಸಭಾ ಕ್ಷೇತ್ರದಿಂದ ವೈಎಸ್‌ಆರ್‌ಸಿಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2019ರಲ್ಲೂ ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಈ ಬಾರಿಯಾದರೂ ಮತದಾರರು ಇವರ ಕೈಹಿಡಿಯುತ್ತಾರೋ ಎಂದು ಕಾದು ನೋಡಬೇಕಾಗಿದೆ.

ಡಾ. ಗೂಡೂರಿ ಶ್ರೀನಿವಾಸ್‌ (ವೈಎಸ್‌ಆರ್‌ಸಿಪಿ)

ರಾಜಮಂಡ್ರಿ ಕ್ಷೇತ್ರದಲ್ಲಿ ಪುರಂದೇಶ್ವರಿ ಅವರ ವಿರುದ್ಧ ಸೆಣಸಲು ವೈಎಸ್‌ಆರ್‌ಸಿಪಿ ಡಾ. ಗೂಡೂರಿ ಶ್ರೀನಿವಾಸ್‌ ಅವರನ್ನು ಅಖಾಡಕ್ಕಿಳಿಸಿದೆ. ರಾಜಕೀಯದಲ್ಲಿ ಅನನುಭವಿಯಾದರೂ ಶ್ವಾಸಕೋಶ ತಜ್ಞರಾಗಿ ಹೆಸರು ಮಾಡಿರುವ ಶ್ರೀನಿವಾಸ್‌ ಅವರನ್ನು ಜನರು ಗೆಲ್ಲಿಸುತ್ತಾರೆಂಬ ವಿಶ್ವಾಸ ವೈಎಸ್‌ಆರ್‌ಸಿಪಿ ನಾಯಕರದ್ದಾಗಿದೆ. ‘ವಿಜಯ ಭಾರತಿ ಚೆಸ್ಟ್‌ ಇನ್‌ಸ್ಟಿಟ್ಯೂಟ್‌’ ಮೂಲಕ ಇವರು ರಾಜಮಂಡ್ರಿಯಲ್ಲಿ ಚಿರಪರಿಚಿತ ವೈದ್ಯರಾಗಿದ್ದಾರೆ. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ವೈಎಸ್‌ಆರ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭರತ್‌ ಮಾರ್ಗಾನಿ ಅವರು 1,21,634 ಮತಗಳ ಅಂತರದಿಂದ ಟಿಡಿಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಕಳೆದ ಬಾರಿ ಪಕ್ಷದ ಅಭ್ಯರ್ಥಿಗೆ ಭರ್ಜರಿ ಜಯ ಲಭಿಸಿರುವುದು ಶ್ರೀನಿವಾಸ್‌ ಅವರ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. ಭರತ್‌ ಮಾರ್ಗಾನಿ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಲೆಕ್ಕಾಚಾರದಿಂದ ಪಕ್ಷದ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರು ಈ ಬಾರಿ ಇಲ್ಲಿ ಅಭ್ಯರ್ಥಿಯನ್ನು ಬದಲಿಸಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT