ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಕೊಳೆಗೇರಿಗಳ ಮತ ಚಿತ್ತ ಯಾರತ್ತ?

ದೆಹಲಿಯ 675 ಕೊಳೆಗೇರಿಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ವಾಸ l ಮತ ಸೆಳೆಯಲು ಕಸರತ್ತು
Published 24 ಮೇ 2024, 0:54 IST
Last Updated 24 ಮೇ 2024, 0:54 IST
ಅಕ್ಷರ ಗಾತ್ರ

ನವದೆಹಲಿ: ಬಿಕಾರಿ ಯಾದವ್‌ ಬಿಹಾರದವರು. 22 ವರ್ಷಗಳಿಂದ ನವದೆಹಲಿಯ ಲಕ್ಷ್ಮಿನಗರದಲ್ಲಿ ತಳ್ಳು ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ದಿನಕ್ಕೆ ₹500ರಿಂದ ₹600 ಸಂಪಾದನೆ ಮಾಡುತ್ತಾರೆ. ಅವರು ಲಕ್ಷ್ಮಿನಗರದ ಕೊಳೆಗೇರಿಯೊಂದರಲ್ಲಿ ನೆಲೆಸಿದ್ದಾರೆ. ಬಿರು ಬಿಸಿಲಿನಲ್ಲಿ ತರಕಾರಿ ವ್ಯಾಪಾರದಲ್ಲಿ ತೊಡಗಿದ್ದ ಅವರಲ್ಲಿ ‘ಲೋಕಸಭಾ ಚುನಾವಣೆಯ ಟ್ರೆಂಡ್‌ ಹೇಗಿದೆ’ ಎಂದು ಪ್ರಶ್ನಿಸಿದಾಗ, ‘ಎಎಪಿ–ಕಾಂಗ್ರೆಸ್‌ ಮೈತ್ರಿಕೂಟ ಕನಿಷ್ಠ ನಾಲ್ಕೈದು ಸೀಟುಗಳಲ್ಲಿ ಗೆಲ್ಲಲಿದೆ’ ಎಂದು ಖಡಾಖಂಡಿತವಾಗಿ ಹೇಳಿದರು. ‘ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಿತ್ತಲ್ಲ’ ಎಂದು ಕೇಳಿದಾಗ, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲು ಚಿತಾವಣೆ ನೀಡುವ ಮೂಲಕ ಬಿಜೆಪಿ ತಪ್ಪು ಮಾಡಿತು. ಕೇಜ್ರಿವಾಲ್‌ ಪರ ದೊಡ್ಡ ಮಟ್ಟದ ಅನುಕಂಪದ ಅಲೆ ನಿರ್ಮಾಣವಾಗಿದೆ. ಮಧ್ಯಮ ವರ್ಗ ಹಾಗೂ ಬಡವರು, ಹಿಂದುಳಿದ ಸಮುದಾಯದವರು ದೊಡ್ಡ ಪ್ರಮಾಣದಲ್ಲಿ ಮೈತ್ರಿಕೂಟದ ಪರ ಮತ ಹಾಕಲಿದ್ದಾರೆ. ಕಾದು ನೋಡಿ’ ಎಂದರು. 

ಅಬಕಾರಿ ನೀತಿ ಹಗರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿರುವ ಆರೋಪ ಇದೆಯಲ್ಲ ಎಂದು ಕೆಣಕಿದಾಗ, ‘ಎಎಪಿ ಸರ್ಕಾರ ಸಣ್ಣ ಮಟ್ಟದ ಭ್ರಷ್ಟಾಚಾರ ನಡೆಸಿರಬಹುದು. ಭ್ರಷ್ಟಾಚಾರ ನಡೆಸದ ಸರ್ಕಾರ ಯಾವುದಿದೆ ಎಂಬುದನ್ನು ತೋರಿಸಿ’ ಎಂದು ಸವಾಲು ಎಸೆದರು. ‘ಎಎಪಿ ಬಂದ ಬಳಿಕ ನಮ್ಮ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆ ಆಗಿದೆ. ಶಿಕ್ಷಣ, ಆರೋಗ್ಯ, ಪಡಿತರ, ವಿದ್ಯುತ್‌, ನೀರು ಎಲ್ಲವೂ ಉಚಿತ ಆಗಿದೆ. ಕೈಯಲ್ಲಿ ನಾಲ್ಕು ಕಾಸು ಉಳಿಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದಲೇ ಕೇಜ್ರಿವಾಲ್‌ ಅವರನ್ನು ಬಿಜೆಪಿ ಬಂಧಿಸಿದೆ. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಸೌಲಭ್ಯಗಳಿಗೆ ಕತ್ತರಿ ಹಾಕಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. 

ದೆಹಲಿಯಲ್ಲಿ 675 ಕೊಳೆಗೇರಿ ಸಮೂಹಗಳಿವೆ. 20 ಲಕ್ಷಕ್ಕೂ ಅಧಿಕ ಮಂದಿ ಕೊಳೆಗೇರಿಗಳಲ್ಲಿ ನೆಲೆಸಿದ್ದಾರೆ. ಇವುಗಳಲ್ಲಿ ಅನೇಕ ಕೊಳೆಗೇರಿಗಳು ಅಕ್ರಮವಾಗಿ ತಲೆ ಎತ್ತಿದಂಥವು. ಇಲ್ಲಿನ ನಿವಾಸಿಗಳು ಭಯ ಹಾಗೂ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಕಳೆದ ವರ್ಷ ಜಿ–20 ಶೃಂಗಸಭೆಯ ಸಂದರ್ಭದಲ್ಲಿ ಗೋವಿಂದಪುರಿ, ಸುಂದರ್‌ ನಗರದ ಹಲವು ಕೊಳೆಗೇರಿಗಳನ್ನು ನೆಲಸಮಗೊಳಿಸಲಾಗಿತ್ತು. ದಕ್ಷಿಣ ದೆಹಲಿಯ ಗೋವಿಂದಪುರಿ ಕೊಳೆಗೇರಿಯ ನಿವಾಸಿಗಳು 2023ರ ಜೂನ್‌ನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡರು. ‘ಹತ್ತಾರು ಬುಲ್ಡೋಜರ್‌ಗಳು 2,000ಕ್ಕೂ ಅಧಿಕ ಮನೆಗಳನ್ನು ನೆಲಸಮಗೊಳಿಸಿದವು. ಇಲ್ಲಿನ ನಿವಾಸಿಗಳು ಕಣ್ಣೀರು ಹಾಕಿದರೂ ಮನೆಗಳನ್ನು ಕೆಡವಿ ಹಾಕಲಾಯಿತು. ವಿವಿಧ ದೇಶಗಳ ಪ್ರತಿನಿಧಿಗಳಿಗೆ ರಾಷ್ಟ್ರ ರಾಜಧಾನಿಯ ಇನ್ನೊಂದು ಮುಖ ಗೊತ್ತಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಗುಡಿಸಲುಗಳನ್ನು ಧ್ವಂಸ ಮಾಡಿಸಿತು. ಆದರೆ, ಸರ್ಕಾರವು ಪುನರ್ವಸತಿ ಕಲ್ಪಿಸಲಿಲ್ಲ. ಇಲ್ಲೇ ಸಣ್ಣ ಗುಡಿಸಲು ಕಟ್ಟಿಕೊಂಡು ನೆಲೆಸಿದ್ದೇವೆ’ ಎಂದು ಹೇಳಿಕೊಂಡರು. 50 ವರ್ಷ ವಯಸ್ಸಿನ ಉಷಾ ಇಲ್ಲಿನ ಜೋಪಡಿಯೊಂದರಲ್ಲಿ ನೆಲೆಸಿದ್ದಾರೆ. ವರ್ಷದ ಹಿಂದೆ ಅವರ ಪತಿ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ ವಿಧವಾ ವೇತನ ಬರುತ್ತಿದೆ. ಜೀವನ ನಿರ್ವಹಣೆಗೆ ಅದನ್ನೇ ನಂಬಿಕೊಂಡಿದ್ದಾರೆ. ಚುನಾವಣೆಯಲ್ಲಿ ಎಎಪಿ ಸೋತರೆ ವಿಧವಾ ವೇತನ ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ನವಜೀವನ ಕೊಳೆಗೇರಿ ಸಮೀಪದಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ರಾಮನಾಥ್‌ ಬಾರ್ತಿ ಅವರು ಕೇಜ್ರಿವಾಲ್‌ ಬಂಧನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ‘ಎಎಪಿ ಸರ್ಕಾರವು ನಮಗೆ ಎಲ್ಲ ಸವಲತ್ತುಗಳನ್ನು ಒದಗಿಸಿ ಉತ್ತಮ ಕೆಲಸ ಮಾಡಿದೆ. ಕೇಜ್ರಿವಾಲ್‌ ಜೈಲಿನಲ್ಲಿದ್ದರೆ ಸೌಲಭ್ಯಗಳೇನೂ ನಿಲ್ಲುವುದಿಲ್ಲ. ಅವರ ಉತ್ತರಾಧಿಕಾರಿಗಳು ಈ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ನಮ್ಮ ಮತ ಅವರಿಗೆ’ ಎಂದರು. 

ಸುಂದರ್‌ ನಗರದ ಕೊಳೆಗೇರಿಯಲ್ಲಿ ನೆಲೆಸಿರುವ ಕಾರು ಚಾಲಕ ಜ್ಞಾನೇಶ್‌, ‘ಈ ಸಲ ಬಿಜೆಪಿಗೆ ಬಹುಮತ ಸಿಗುವುದಿಲ್ಲ. ದೆಹಲಿಯಲ್ಲೂ ಸೀಟುಗಳು ಕಡಿಮೆಯಾಗಲಿವೆ. ಕೆಲವು ವರ್ಷಗಳಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಭಾರಿ ಹೆಚ್ಚಳ ಆಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ಮತ ಹಾಕುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ನನ್ನ ಮತ ಎಎಪಿಗೆ’ ಎಂದು ಬಹಿರಂಗಪಡಿಸಿದರು. 

40ರ ಹರೆಯದ ಶಾಹಿದ್‌ ಅವರು ಉತ್ತರ ಪ್ರದೇಶದವರು. ಉದ್ಯೋಗ ಅರಸಿ ಅವರು ಎಂಟು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿಗೆ ಬಂದ ಅವರು, ಎಲೆಕ್ಟ್ರಿಕ್ ರಿಕ್ಷಾ ಓಡಿಸುತ್ತಿದ್ದಾರೆ. ‘ದೆಹಲಿ ಸರ್ಕಾರವು ನಮಗೆ ಆಟೊ ಕೊಡಿಸಿತು’ ಎಂದು ಖುಷಿಯಿಂದ ಹೇಳಿಕೊಂಡರು. ಸುಮಾರು 30 ಸಾವಿರ ಮಂದಿಗೆ ಎಎಪಿ ಸರ್ಕಾರವು ಆಟೊ ಪರವಾನಗಿ ನೀಡಿದೆ. ಅವರು ಒಂದರ್ಥದಲ್ಲಿ ಎಎಪಿ ಪ್ರಚಾರಕರು ಇದ್ದಂತೆ.

ಲಕ್ಷ್ಮಿನಗರದಲ್ಲಿ ಸಣ್ಣದೊಂದು ವ್ಯವಹಾರ ನಡೆಸುತ್ತಿರುವ ಮನೋಜ್‌ ಕುಮಾರ್, ‘ಸಬ್ಸಿಡಿಗಳಿಂದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಅವುಗಳನ್ನು ಮೊದಲು ನಿಲ್ಲಿಸಬೇಕು. ರಾಷ್ಟ್ರವನ್ನು ಮುನ್ನಡೆಸಬಲ್ಲ ಛಾತಿ ಇರುವವರಿಗೆ ನನ್ನ ಮತ. ಹಾಗಾಗಿ, ಈ ಸಲವೂ ಬಿಜೆಪಿಗೆ ಮತ ಹಾಕುವೆ’ ಎಂದು ಹೇಳಿಕೊಂಡರು.v

ಎಎಪಿಗೆ ಮತ ಏಕೆ? 

ಎಎಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ಬಿಲ್‌ ಗಣನೀಯವಾಗಿ ಕಡಿಮೆಯಾಗಿದೆ. ಕುಡಿಯುವ ನೀರು ಪುಕ್ಕಟೆ ಸಿಗುತ್ತಿದೆ. ಉಚಿತ ಪಡಿತರ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಸುಲಭದಲ್ಲಿ ಸಿಗುತ್ತಿದೆ. ಹೀಗಾಗಿ, ಎಎಪಿಗೆ ಮತ ಹಾಕುತ್ತೇವೆ ಎಂಬುದು ಕೊಳೆಗೇರಿಗಳ ನಿವಾಸಿಗಳ ಅಭಿಪ್ರಾಯ. 

ಬಿಜೆಪಿ ಪರ ಒಲವು ಏಕೆ? 

ತಮ್ಮ ಸಮುದಾಯಕ್ಕೆ ಭದ್ರತೆ ಒದಗಿಸುತ್ತದೆ ಎಂಬ ಕಾರಣಕ್ಕೆ ಬಿಜೆಪಿಗೆ ಮತ ಹಾಕುತ್ತೇವೆ ಎಂದು ಕೊಳೆಗೇರಿಗಳ ಅನೇಕ ನಿವಾಸಿಗಳು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ಹಿಂದೂ ರಾಷ್ಟ್ರ ಹಾಗೂ ರಾಷ್ಟ್ರೀಯ ವಾದದ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಮತ ನೀಡುತ್ತೇವೆ ಎಂದೂ ಅವರು ಹೇಳುತ್ತಾರೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕಡೆಗೆ ಒಲವು ತೋರುತ್ತೇವೆ ಎಂದು ಹೇಳುವುದನ್ನು ಮರೆಯುವುದಿಲ್ಲ. 

ಲೋಕನೀತಿ ಸಮೀಕ್ಷೆಯ ಪ್ರಕಾರ, 2020ರ ವಿಧಾನಸಭಾ ಚುನಾವಣೆಯಲ್ಲಿ ಶೇ 61ರಷ್ಟು ಬಡವರು ಎಎಪಿಗೆ ಮತ ಚಲಾಯಿಸಿದ್ದರು. 2015ಕ್ಕೆ ಹೋಲಿಸಿದರೆ ಮತ ಪ್ರಮಾಣ ಶೇ 5ರಷ್ಟು ಕಡಿಮೆಯಾಗಿತ್ತು. ಇನ್ನೊಂದೆಡೆ, 2015ರಲ್ಲಿ ಶೇ 21ರಷ್ಟು ಬಡವರು ಬಿಜೆಪಿಗೆ ಮತ ಹಾಕಿದ್ದರು. 2020ಕ್ಕೆ ಶೇ 33ರಷ್ಟು ಬಡವರ ಮತ ಕೇಸರಿ ಪಾಳಯಕ್ಕೆ ಬಂದಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT