ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಸಹೋದರಿ ಸುಪ್ರಿಯಾ ಸುಳೆ ವಿರುದ್ಧ ಪತ್ನಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಿದ್ದು ತಪ್ಪು ನಿರ್ಧಾರ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಜನಸಮ್ಮಾನ್ ಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಎಲ್ಲ ಸಹೋದರಿಯರನ್ನು ಪ್ರೀತಿಸುತ್ತೇನೆ. ಮನೆಯೊಳಗೆ ರಾಜಕೀಯ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಸುನೇತ್ರಾ ಸ್ಪರ್ಧೆಯು ಎನ್‌ಸಿಪಿ ಸಂಸದೀಯ ಸಮಿತಿಯ ನಿರ್ಧಾರವಾಗಿತ್ತು. ಆ ನಿರ್ಧಾರ ತಪ್ಪು ಎಂದು ಈಗ ಅನಿಸುತ್ತಿದೆ’ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಎನ್‌ಸಿಪಿ (ಶರದ್ ಪವಾರ್) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ವಿರುದ್ಧ ಅಜಿತ್ ಪವಾರ್ ಪತ್ನಿ ಸುನೇತ್ರಾ ಅವರು ಸ್ಪರ್ಧಿಸಿ ಸೋಲುಂಡಿದ್ದರು.
‘ಇನ್ನು ಮುಂದೆ ರೈತರು, ಮಹಿಳೆಯರು ಮತ್ತು ಯುವಕರ ಪರವಾದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಮಾತ್ರ ಮಾತನಾಡಬೇಕೆಂದು ನಿರ್ಧರಿಸಿದ್ದೇನೆ. ಯಾವುದೇ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.
ಶರದ್ ಪವಾರ್ ಅವರನ್ನು ಬಿಜೆಪಿ ಮತ್ತು ಶಿವಸೇನಾ ಗುರಿಯಾಗಿಸುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಮಹಾಯುತಿ ಮೈತ್ರಿ ಕೂಟದಲ್ಲಿರುವವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಬಗ್ಗೆ ಅರಿವಿರಬೇಕು. ನಾವೆಲ್ಲ ಒಟ್ಟಿಗೆ ಸೇರಿದಾಗ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ’ ಎಂದರು.