ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಸಿಎಂ | ಹಿಂದುತ್ವವಾದಿ ನಾಯಕ ಯಾದವ್ ಬಗ್ಗೆ ತಿಳಿಯಬೇಕಾದ ಅಂಶಗಳು...

Published 12 ಡಿಸೆಂಬರ್ 2023, 3:23 IST
Last Updated 12 ಡಿಸೆಂಬರ್ 2023, 3:23 IST
ಅಕ್ಷರ ಗಾತ್ರ

ಭೋಪಾಲ್: ಅಚ್ಚರಿಯ ಬೆಳವಣಿಗೆಯಲ್ಲಿ, ಮಧ್ಯಪ್ರದೇಶ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಒಬಿಸಿ ನಾಯಕ ಹಾಗೂ ಉಜ್ಜೈನಿ ಶಾಸಕ ಮೋಹನ್‌ ಯಾದವ್‌ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.

ಹಿಂದುತ್ವದ ಪ್ರಖರ ಪ್ರತಿಪಾದಕರಾಗಿರುವ ಮೋಹನ್ ಯಾದವ್ ಅವರಿಗೆ 58 ವರ್ಷಗಳು. ಅವರು ಮೂರು ಸಲ ಉಜ್ಜೈನಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸಂಪುಟದಲ್ಲಿ ಯಾದವ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು.

ಈ ಹಿಂದೆ ಅವರು ಧಾರ್ಮಿಕ ಮಹಾಕಾವ್ಯ ‘ರಾಮಚರಿತಮಾನಸ’ ವನ್ನು ಕಾಲೇಜು ಶಿಕ್ಷಣದಲ್ಲಿ ಐಚ್ಛಿಕ ವಿಷಯವನ್ನಾಗಿ ಮಾಡುವುದಾಗಿ ಘೋಷಿಸಿ, ಗಮನ ಸೆಳೆದಿದ್ದರು. 

ಮಧ್ಯಪ್ರದೇಶದ ಐತಿಹಾಸಿಕ ನಗರ ಉಜ್ಜೈನಿಯಲ್ಲಿ ಮೋಹನ್‌ ಯಾದವ್‌ 1965ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ ಒಡನಾಟ ಬೆಳಸಿಕೊಂಡಿದ್ದ ಮೋಹನ್‌ ಯಾದವ್‌ ಅಲ್ಲಿನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಿದ್ದರು.

ಶೈಕ್ಷಣಿಕ ಜೀವನ...

ಉಜ್ಜೈನಿಯ ಮಾಧವ ವಿಜ್ಞಾನ ಕಾಲೇಜಿನಲ್ಲಿ ಮೋಹನ್‌ ಯಾದವ್‌ ಪದವಿ ಪಡೆಸಿದ್ದಾರೆ. ನಂತರ ಎಲ್‌ಎಲ್‌ಬಿ ಹಾಗೂ ಎಂಬಿಎ ಪದವಿ ಪಡೆದಿರುವ ಅವರು, ಪಿಎಚ್‌.ಡಿ ಪದವಿಯನ್ನೂ ಪಡೆದಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿಯಾಗಿ, ನಂತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1993ರಿಂದ 1995ರ ವರೆಗೆ ಆರ್‌ಎಸ್‌ಎಸ್‌ನ ಉಜ್ಜೈನಿ ಘಟಕದ ಪದಾಧಿಕಾರಿಯಾಗಿದ್ದರು.

ರಾಜಕೀಯ ಜೀವನ...

ಮೋಹನ್‌ ಯಾದವ್‌ ಅವರು 1995ರಿಂದ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. 2011ರಿಂದ 2013ರ ವರೆಗಿನ ಅವಧಿಯಲ್ಲಿ ಮಧ್ಯಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

2013ರಲ್ಲಿ ಉಜ್ಜೈನಿ ದಕ್ಷಿಣ ಕ್ಷೇತ್ರದಿಂದ ಗೆದ್ದು, ಮೊದಲ ಬಾರಿಗೆ ಮೋಹನ್‌ ಯಾದವ್‌ ವಿಧಾನಸಭೆ ಪ್ರವೇಶಿಸಿದರು. ನಂತರ 2018 ಹಾಗೂ 2023ರಲ್ಲಿಯೂ  ಗೆಲ್ಲುವ ಮೂಲಕ ಕ್ಷೇತ್ರದ ಮೇಲಿನ ತಮ್ಮ ಹಿಡಿತವನ್ನು ಸಾಬೀತುಪಡಿಸಿದ್ದಾರೆ.

2020ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬಿಜೆಪಿ ಮತ್ತೆ ಅಧಿಕಾರ ಪಡೆಯಿತು. ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸಂಪುಟದಲ್ಲಿ ಮೋಹನ್‌ ಯಾದವ್‌ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT