ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: 4ನೇ ಬಾರಿಯೂ ಒಬಿಸಿ ನಾಯಕನ ಆಯ್ಕೆ; ಹಿರಿಯ ಆಕಾಂಕ್ಷಿಗಳಿಗೆ ಬ್ರೇಕ್

Published 11 ಡಿಸೆಂಬರ್ 2023, 13:58 IST
Last Updated 11 ಡಿಸೆಂಬರ್ 2023, 13:58 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡಿರುವ ಬಿಜೆಪಿ, ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ. ಆ ಮೂಲಕ ನಾಲ್ಕನೇ ಬಾರಿಯೂ ಒಬಿಸಿ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಒಂದಾದ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ಮತದಾನ ನಡೆದಿತ್ತು. 163 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಆ ಮೂಲಕ ಕಳೆದ 19 ವರ್ಷಗಳಿಂದ ನಿರಂತರವಾಗಿ ಅಧಿಕಾರದಲ್ಲಿರುವ ಬಿಜೆಪಿಗೆ ಮುಂದಿನ ಐದು ವರ್ಷಗಳೂ ಅಧಿಕಾರದ ಖಾತ್ರಿಯನ್ನು ಮತದಾರರು ನೀಡಿದ್ದಾರೆ.

ಆದರೆ ಈ ಬಾರಿ ಬಿಜೆಪಿ ಒಬಿಸಿ ನಾಯಕ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ಹಿರಿಯ ನಾಯಕರ ನಿರೀಕ್ಷೆಗೆ ತಣ್ಣೀರೆರೆಚಿದೆ. ಪ್ರಧಾನಿ ನರೇಂದ್ರ ಮೋದಿ ನಾಮಬಲ, ಹಿಂದುತ್ವ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುಮಾಡಿ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತೆ ಸಿಎಂ ಸ್ಥಾನ ಅಲಂಕರಿಸಲು ಸಜ್ಜಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. 

‘ನಾನೊಬ್ಬ ಪಕ್ಷದ ಕಾರ್ಯಕರ್ತ. ಪಕ್ಷ ನೀಡುವ ಯಾವುದೇ ಕೆಲಸ ಮಾಡಲು ಸಿದ್ಧ ಹಾಗೂ ಪಕ್ಷದ ನಿರ್ಧಾರಕ್ಕೆ ಬದ್ಧ’ ಎಂದು ಚೌಹಾಣ್ ಸ್ಪಷ್ಟಪಡಿಸಿದ್ದರು. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಡಿ. 3ರಂದು ಮತ ಎಣಿಕೆ ಪೂರ್ಣಗೊಂಡಿದ್ದರೂ, ಸುಮಾರು ಒಂದು ವಾರಗಳ ಕಸರತ್ತಿನ ನಂತರ ಬಿಜೆಪಿ ಶಾಸಕಾಂಗ ಪಕ್ಷವು ಮುಖ್ಯಮಂತ್ರಿ ಘೋಷಣೆ ಮಾಡಿದೆ. ಇದರ ಹಿಂದಿರುವ ಪ್ರಮುಖ ಅಂಶಗಳಿವು.

  • 58 ವರ್ಷದ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದರಿಂದಾಗಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಇತರ ಹಿರಿಯ ಆಕಾಂಕ್ಷಿಗಳ ಸಿಎಂ ರೇಸ್ ಕೊನೆಗೊಂಡಿದೆ.

  • 2003ರಿಂದ ಒಬಿಸಿ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ತನ್ನ ಲೆಕ್ಕಾಚಾರವನ್ನು ಬಿಜೆಪಿ ಈ ಬಾರಿಯೂ ಮುಂದುವರಿಸಿದೆ. 2003ರಲ್ಲಿ ಉಮಾ ಭಾರತಿ, ನಂತರ ಒಬಿಸಿ ಸಮುದಾಯಕ್ಕೇ ಸೇರಿದ ಬಾಬುಲಾಲ್ ಗೌರ್, ಆನಂತರ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿತ್ತು.

  • ಮೋಹನ್ ಯಾದವ್ ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ 2013ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು. 2018ರಲ್ಲಿ ಮತ್ತೆ ಆಯ್ಕೆಯಾದರು. 2023ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚೇತನ್ ಯಾದವ್ ವಿರುದ್ಧ 12,941 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

  • ಹಿಂದೆ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಪಕ್ಷದಿಂದ ಹೊರನಡೆದ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಡೆಯಿಂದ ಪತನಗೊಂಡು ರಚನೆಯಾದ ಶಿವರಾಜ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಯಾದವ್ ಮೊದಲ ಬಾರಿಗೆ ಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT