ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: ಶಿವಸೇನಾ ಶಾಸಕರನ್ನು ಸೆಳೆದುಕೊಳ್ಳುವುದೇ ಬಿಜೆಪಿ?

ರೆಸಾರ್ಟ್ ರಾಜಕೀಯದ ಸದ್ದು: ಕಾಂಗ್ರೆಸ್ ಕಿಡಿ
ಫಾಲೋ ಮಾಡಿ
Comments

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2019ರಲ್ಲಿ ಬಿಜೆಪಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಎರಡು ವಾರ ಕಳೆದರೂ ಅದಕ್ಕೆ ಸರಕಾರ ರಚಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಮುಖ್ಯಮಂತ್ರಿ ಪದವಿಯ ಕುರಿತು ಅದರ ಮಿತ್ರ ಪಕ್ಷ ಶಿವಸೇನಾ ಮುಂದಿಟ್ಟ ಬೇಡಿಕೆ. ನಮ್ಮ ಪಕ್ಷದವರೇ ಸಿಎಂ ಆಗಬೇಕೆಂದು ಶಿವಸೇನಾ ಒತ್ತಾಸೆಯು ಅದರ ಎನ್‌ಡಿಎ ಮಿತ್ರಪಕ್ಷ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಿಸಿದೆ.

ಈ ನಡುವೆ, ಮಹಾರಾಷ್ಟ್ರ ವಿಧಾನಸಭೆಯ ಅವಧಿಯು ಶನಿವಾರಕ್ಕೆ ಕೊನೆಯಾಗುತ್ತಿದ್ದು, ಬಿಜೆಪಿಯು ಗುರುವಾರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ, ಸರಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯ ನಡುವೆಯೇ, ಶಿವಸೇನಾ ಶಾಸಕರನ್ನು ಬಿಜೆಪಿಯು ಸೆಳೆದುಕೊಳ್ಳಲಿದೆಯೇ ಎಂಬ ಊಹಾಪೋಹ ಸದ್ದು ಮಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ಮುಖಂಡ ಸಂಜಯ್ ರಾವತ್, ನಮ್ಮೆಲ್ಲ ಶಾಸಕರೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಮತ್ತು ನಾಯಕ ಉದ್ಧವ್ ಠಾಕ್ರೆಯ ನಿಲುವನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ, ನಾವಂತೂ ವಿರೋಧ ಪಕ್ಷ ಸ್ಥಾನದಲ್ಲಿಯೇ ಕೂರುತ್ತೇವೆ ಎಂದು ಇಷ್ಟರವರೆಗೆ ಸರಕಾರ ರಚನೆಗೆ ಪ್ರಯತ್ನ ಮಾಡುತ್ತಿದ್ದ ಕಾಂಗ್ರೆಸ್ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ (ಎನ್‌ಸಿಪಿ) ಪಕ್ಷಗಳು ಘೋಷಿಸಿವೆ.

ಬಿಜೆಪಿ-ಶಿವಸೇನಾ ಜತೆಗೂಡಿ ಸರಕಾರ ರಚಿಸುತ್ತವೆ ಎಂಬುದು ಬಹುತೇಕ ಖಚಿತವಾಗಿದ್ದರೂ, ತಮ್ಮ ನಾಯಕನಾದ ಉದ್ಧವ್ ಠಾಕ್ರೆ ಅವರಿಗೆ ಈ ಕುರಿತು ಬಿಜೆಪಿಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹಿರಿಯ ಸೇನಾ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯು 105 ಸ್ಥಾನಗಳಲ್ಲಿ ಗೆದ್ದಿದ್ದರೆ, ಶಿವಸೇನಾ 56 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

"ಬಿಜೆಪಿಯು ರಾಜ್ಯಪಾಲರನ್ನು ಭೇಟಿ ಮಾಡಲು ಹೊರಟಿರುವುದು ಒಳ್ಳೆಯದೇ. ಏಕೈಕ ಅತಿದೊಡ್ಡ ಪಕ್ಷವೇ ಸರಕಾರ ರಚನೆಗೆ ಮೊದಲು ಹಕ್ಕು ಮಂಡಿಸಬೇಕು. ಬಿಜೆಪಿ ಹಕ್ಕು ಮಂಡಿಸಿದರೆ, ಸದನದಲ್ಲಿ ಅವರು ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಅವರಿಗೆ ನಮ್ಮ ಶುಭಾಶಯಗಳು" ಎಂದು ರಾವತ್ ಹೇಳಿದ್ದಾರೆ.

ಆದರೆ, ಶಿವಸೇನೆಯ ಶಾಸಕರನ್ನು ಬಿಜೆಪಿಯು ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಸುದ್ದಿಗಳ ಬಗ್ಗೆ ರಾವತ್ ಗರಂ ಆಗಿದ್ದಾರೆ. "ಸೇನಾ ಶಾಸಕರನ್ನು ಬೇಟೆಯಾಡುವುದು ಯಾರಿಂದಲೂ ಅಸಾಧ್ಯ. ಶಾಸಕರನ್ನು ಸೆಳೆದುಕೊಳ್ಳುವ ಸಾಧ್ಯತೆಗಳೇನೋ ಇವೆ, ಆದರೆ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷವೂ ಒಡೆಯುವುದಿಲ್ಲ. ಸೇನಾ ಶಾಸಕರೆಲ್ಲರೂ ಮಾತೋಶ್ರೀಯಲ್ಲೇ ಇದ್ದು, ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸುತ್ತಾರೆ" ಎಂದವರು ಹೇಳಿದ್ದಾರೆ.

ಚುನಾವಣೆಗೆ ಮುನ್ನವೇ 50:50 ಅಧಿಕಾರ ಹಂಚಿಕೆ ಸೂತ್ರ ಸಿದ್ಧವಾಗಿದ್ದು, ನಾವು ಅದಕ್ಕೇ ಬದ್ಧ ಎಂದು ಶಿವಸೇನಾ ತರ್ಕಿಸುತ್ತಿದೆ. ಆದರೆ, ಬಿಜೆಪಿಯು ಐದು ವರ್ಷವೂ ಬಿಜೆಪಿ ಮುಖ್ಯಮಂತ್ರಿಯೇ ಇರುತ್ತಾರೆ ಎಂದು ಹೇಳುತ್ತಾ ಮಾತು ತಪ್ಪಿದೆ ಎಂಬುದು ರಾವತ್ ಆರೋಪ.

ಈ ನಡುವೆ, ಶಿವಸೇನಾ ಪಕ್ಷವು ತನ್ನ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಕುರಿತು ಕಾಂಗ್ರೆಸ್ ವಕ್ತಾರ ಸಚಿವ್ ಸಾವಂತ್ ಅವರು ಟ್ವೀಟ್ ಮಾಡಿದ್ದು, ಶಿವಸೇನಾ ಬಿಜೆಪಿಯ 'ಮಹಾಯುತಿ' ಮೈತ್ರಿಕೂಟದ ಪಾಲುದಾರ. ಶಿವಸೇನಾಕ್ಕೆ ಈಗ ತನ್ನ ಶಾಸಕರನ್ನು ಬಿಜೆಪಿಯು ಸೆಳೆದುಕೊಳ್ಳುತ್ತದೆ ಎಂಬ ಆತಂಕ ಎದುರಾಗಿದೆ ಎಂದಾದರೆ, ಬಿಜೆಪಿಯು ನೈತಿಕವಾಗಿ ಎಷ್ಟರ ಮಟ್ಟಿಗೆ ಭ್ರಷ್ಟವಾಗಿದೆ ಮತ್ತು ನಾವು ಮಹಾರಾಷ್ಟ್ರವನ್ನು ಅವರಿಂದ ಯಾಕೆ ರಕ್ಷಿಸಬೇಕು ಎಂಬುದು ವೇದ್ಯವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT