ಮುಂಬೈ: ಫಲಾನುಭವಿಗಳಿಗೆ ನಗದು ನೀಡುವ ಯೋಜನೆಗಳನ್ನು ರದ್ದುಗೊಳಿಸುವಂತೆ ಕೋರಿ ನವಿ ಮುಂಬೈನ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು, ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ‘ಮಹಾ ಯುತಿ’ ಮೈತ್ರಿ ಸರ್ಕಾರವು ತನ್ನ ಮಹತ್ವದ ಯೋಜನೆ ‘ಮುಖ್ಯಮಂತ್ರಿ ಲಡ್ಕಿ ಬಹಿನ್ (ಪ್ರೀತಿಯ ಸಹೋದರಿ)’ ಬಗ್ಗೆ ಅಬ್ಬರದ ಪ್ರಚಾರ ನಡೆಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಆದಾಗ್ಯೂ, ನ್ಯಾಯಾಲಯವು ಯೋಜನೆಯನ್ನು ತಡೆಹಿಡಿಯಲು ನಿರಾಕರಿಸಿದೆ. ಆದರೆ, ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿದೆ.
2024-25ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನೆ (ಮುಖ್ಯಮಂತ್ರಿಗಳ ಪ್ರೀತಿಯ ಸಹೋದರಿ ಯೋಜನೆ) ಮತ್ತು ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆ (ಮುಖ್ಯಮಂತ್ರಿಗಳ ಯುವ ಉದ್ಯೋಗ ಕೌಶಲ ತರಬೇತಿ ಯೋಜನೆ) ಘೋಷಿಸಲಾಗಿದೆ.
ಇದರಿಂದ ತೆರಿಗೆದಾರರು ಮತ್ತು ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ. ರಾಜ್ಯದ ಸಾಲವು ಈಗಾಗಲೇ ₹7.8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಬೊಕ್ಕಸಕ್ಕೆ ಮತ್ತಷ್ಟು ಹೊರೆ ಉಂಟುಮಾಡಲಿದೆ ಎಂದು ಅರ್ಜಿದಾರ ನವೀದ್ ಅಬ್ದುಲ್ ಸಯೀದ್ ಮುಲ್ಲಾ ಪ್ರತಿಪಾದಿಸಿದ್ದಾರೆ.
‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ, ಪ್ರಸ್ತುತ ಸಮ್ಮಿಶ್ರ ಸರ್ಕಾರದ ಪಕ್ಷಗಳ ಕೆಲವು ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಲು ನಿರ್ದಿಷ್ಟ ವರ್ಗದ ಮತದಾರರಿಗೆ ಇಂತಹ ನಗದು ಲಾಭ ಯೋಜನೆಗಳು ಲಂಚ ಅಥವಾ ಉಡುಗೊರೆಗೆ ಸಮಾನಾರ್ಥಕವಾಗಿದೆ’ ಎಂದು ಅರ್ಜಿದಾರರು ವಾದಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಕೀಲ ಓವೈಸ್ ಪೆಚ್ಕರ್ ಅವರು ಈ ಪಿಐಎಲ್ ಅನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.