ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೇ ಚುನಾವಣೆ ಎಂಬುದು ಭಾವನಾತ್ಮಕ ತಂತ್ರ: ಶರದ್ ಪವಾರ್ ವಿರುದ್ಧ ಅಜಿತ್ ಟೀಕೆ

Published 4 ಫೆಬ್ರುವರಿ 2024, 11:04 IST
Last Updated 4 ಫೆಬ್ರುವರಿ 2024, 11:04 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಸಂಸ್ಥಾಪಕ ಶರದ್‌ ಪವಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎನ್‌ಸಿಪಿ ನಾಯಕತ್ವದ ವಿರುದ್ಧ 2023ರ ಜುಲೈನಲ್ಲಿ ಬಂಡಾಯ ಸಾರಿದ್ದ ಅಜಿತ್‌, ತಮ್ಮ ಬೆಂಬಲಿಗ ಎಂಟು ಶಾಸಕರೊಂದಿಗೆ ಶಿವಸೇನಾ (ಏಕನಾಥ ಶಿಂದೆ ಬಣ) ಮತ್ತು ಬಿಜೆಪಿ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ.

ಶರದ್‌ ವಿರುದ್ಧ ಬಂಡಾಯ ಸಾರಿದ ತಮ್ಮ ನಿಲುವನ್ನು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಾ ಬಂದಿರುವ ಅಜಿತ್‌, 80ಕ್ಕಿಂತ ಹೆಚ್ಚು ವಯಸ್ಸಾಗಿರುವ ಶರದ್‌ ಪವಾರ್‌, ಹೊಸ ತಲೆಮಾರಿನ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಪುಣೆ ಜಿಲ್ಲೆಯ ಬಾರಮತಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅಜಿತ್, 83 ವರ್ಷದ ಶರದ್‌ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ್ದಾರೆ. 'ಕೆಲವರು ಯಾವಾಗ ತಮ್ಮ ಪ್ರಯಾಣ ನಿಲ್ಲಿಸುತ್ತಾರೆ ಎಂಬುದು ಗೊತ್ತಿಲ್ಲ. ಆದರೆ, ಇದೇ ತಮ್ಮ ಕೊನೇ ಚುನಾವಣೆ ಎನ್ನುತ್ತಿರುವುದು ಅವರ ಭಾವನಾತ್ಮಕ ಹೇಳಿಕೆಯಾಗಿರಬಹುದು. ಯಾವ ಚುನಾವಣೆ ಕೊನೆಯದ್ದಾಗಲಿದೆ ಎಂಬುದು ನನಗೆ ತಿಳಿದಿಲ್ಲ' ಎಂದು ಕುಟುಕಿದ್ದಾರೆ.

'ನೀವು ಹಿರಿಯ ನಾಯಕನ (ಶರದ್‌ ಪವಾರ್‌) ಮಾತುಗಳನ್ನು ಹಲವು ವರ್ಷಗಳಿಂದ ಕೇಳುತ್ತಾ ಬಂದಿದ್ದೀರಿ. ಈಗ ನನ್ನ ಮಾತನ್ನು ಆಲಿಸಿ. ನಾನು ಕಣಕ್ಕಿಳಿಸುವ ಅಭ್ಯರ್ಥಿಗೆ ಮತ ಚಲಾಯಿಸಿ. ಆಗಬೇಕಾದರೆ, ಜನ ನನ್ನ ಅಭ್ಯರ್ಥಿಗೆ ಮತ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಹೇಳಬಲ್ಲೆ. ನೀವು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿದವರನ್ನು ಮರೆಯದಿರಿ' ಎಂದು ಮನವಿ ಮಾಡಿದ್ದಾರೆ.

ಬಾರಮತಿ ಕ್ಷೇತ್ರದ ಶಾಸಕರೂ ಆಗಿರುವ ಅಜಿತ್‌, 'ನೀವು ಒಳ್ಳೆಯದನ್ನು ಮಾಡಲು ಹೊರಟಾಗ, ಟೀಕೆಗಳನ್ನೂ ಕೇಳಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಜಿತ್ ವಿರುದ್ಧ ಗುಡುಗಿದ ಶರದ್ ಬಣ
ಉಪಮುಖ್ಯಮಂತ್ರಿ ಅಜಿತ್‌ ನೀಡಿರುವ ಹೇಳಿಕೆಗೆ ಶರದ್‌ ಪವಾರ್‌ ಬಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಜಿತ್‌ ಹೇಳಿಕೆ ಅಮಾನವೀಯವಾದದ್ದು. ಅವರು ಶರದ್‌ ಪವಾರ್‌ ಸಾವನ್ನು ಬಯಸುತ್ತಿದ್ದಾರೆ ಎಂದು ಕಿಡಿಕಾರಿದೆ.

ಶರದ್ ಬಣದ ಶಾಸಕ ಜೀತೇಂದ್ರ ಔಹಾದ್‌, ಉಪಮುಖ್ಯಮಂತ್ರಿಯವರು ಸೌಜನ್ಯದ ಮಿತಿ ಮೀರಿದ್ದಾರೆ ಎಂದು ಗುಡುಗಿದ್ದಾರೆ.

ಶರದ್ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಶಾಶ್ವತವಾದದ್ದು ಎಂದಿರುವ ಔಹಾದ್‌, 'ಶರದ್‌ ಪವಾರ್‌ ಅವರ ಸಾವಿಗಾಗಿ ಪ್ರಾರ್ಥಿಸುತ್ತಿರುವ ತಮ್ಮ ಅಮಾನವೀಯ ಹೇಳಿಕೆ ಬಗ್ಗೆ ಅಜಿತ್‌ ಪವಾರ್‌ ಆಲೋಚಿಸಬೇಕು. ಅಜಿತ್‌ ಪವಾರ್‌ ಎಂತಹ ವ್ಯಕ್ತಿ ಎಂಬುದು ಇದೀಗ ಇಡೀ ಮಹಾರಾಷ್ಟ್ರಕ್ಕೆ ಗೊತ್ತಾಗಿದೆ' ಎಂದು ಹೇಳಿದ್ದಾರೆ.

ಸದ್ಯ ರಾಜ್ಯಸಭೆ ಸದಸ್ಯರಾಗಿರುವ ಶರದ್‌ ಪವಾರ್‌, 1960ರಿಂದ ಇದುವರೆಗೆ ನಡೆದಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸೋಲರಿಯದ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT