ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರೇ ಕಳಿಸಿದ್ದಾನೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಮಮತಾ ಬ್ಯಾನರ್ಜಿ ಕಿಡಿ

Published 24 ಮೇ 2024, 11:12 IST
Last Updated 24 ಮೇ 2024, 11:12 IST
ಅಕ್ಷರ ಗಾತ್ರ

ಕೋಲ್ಕತ್ತ: ನನ್ನನ್ನು ದೇವರೇ ಕಳುಹಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದಾರೆ.

‘ಚುನಾವಣಾ ಸೋಲಿನ ಭಯದಿಂದ ಬಿಜೆಪಿ ನಾಯಕರು ಎಲ್ಲಾ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದೇ ವಾಗ್ದಾಳಿ ನಡೆಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್‌ಬನ್ ಪ್ರದೇಶದ ಮತುರ್‌ಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಈಗ ಅವರು ತಮನ್ನು ತಾವು ದೈವೀ ಪುತ್ರ ಎಂದು ಕರೆದುಕೊಳ್ಳುತ್ತಿದ್ದಾರೆ. ನಮ್ಮ ಹಾಗೆ ಜೈವಿಕ ‍ಪೋಷಕರು ಇಲ್ಲದೆ ಹುಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ದೇವರೇ ನನ್ನನ್ನು ಕಳಿಸಿದ್ದಾರೆ ಎಂದು ಹೇಳುತ್ತಾರೆ. ಗಲಭೆ ಪ್ರಚೋದಿಸುವ, ಜಾಹೀರಾತುಗಳ ಮೂಲಕ ಸುಳ್ಳು ಹರಡುವ, ಎನ್‌ಆರ್‌ಸಿ ಹೆಸರಿನಲ್ಲಿ ಜನರನ್ನು ಜೈಲಿಗೆ ಹಾಕುವವರನ್ನು ದೇವರು ಕಳಿಸಿರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಸಿಎಎ ಹೆಸರಿನಲ್ಲಿ ಗೂಂಡಾಗಿರಿಯನ್ನು ಪ್ರಾಯೋಜಿಸಲು ದೇವರು ತನ್ನ ದೂತರನ್ನು ಕಳುಹಿಸುತ್ತಾನೆಯೇ? ಅಥವಾ 100-ದಿನದ ಕೆಲಸಕ್ಕೆ ಹಣವನ್ನು ನಿಲ್ಲಿಸುತ್ತಾನೆಯೇ? ಗ್ರಾಮಗಳಲ್ಲಿ ಮನೆಗಳನ್ನು ನಿರ್ಮಿಸುವುದನ್ನು ತಡೆಯುತ್ತಾನೆಯೇ? ಜನರ ಬ್ಯಾಂಕ್ ಖಾತೆಗೆ ₹15 ಲಕ್ಷ ಮಾ ಮಾಡುವ ಭರವಸೆಯಿಂದ ಈಡೇರಿಸದೆ ಇರುತ್ತಾನೆಯೇ? ದೇವರು ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ’ ಎಂದು ಮಮತಾ ಕೇಳಿದ್ದಾರೆ.

ಭಗವಾನ್ ಜಗನ್ನಾಥ, ‍ಪ್ರಧಾನಿ ನರೇಂದ್ರ ಮೋದಿಯವರ ಭಕ್ತ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿಕೆಯನ್ನೂ ಉಲ್ಲೇಖಿಸಿ ಮಮತಾ ಆಕ್ರೋಶ ಹೊರಹಾಕಿದರು.

ಒಂದು ವೇಳೆ ಅವರ ಅನುಯಾಯಿಗಳು ಹೇಳಿಕೊಂಡಂತೆ ಭಗವಾನ್ ಜಗನ್ನಾಥ, ಮೋದಿ ಬಾಬು ಅವರ ಭಕ್ತರೇ ಆಗಿದ್ದರೇ, ನಾವು ಅವರ ಹೆಸರಲ್ಲಿ ದೇಗುಲ ನಿರ್ಮಿಸುತ್ತಿದ್ದೆವು. ಪೂಜೆ ಮಾಡಿ ಅವರ ಪಟದ ಮುಂದೆ ಪ್ರಸಾದ ಇಡುತ್ತಿದ್ದೆವು. ಒಬ್ಬ ಪೂಜಾರಿಯನ್ನೂ ನೇಮಿಸಿಕೊಳ್ಳುತ್ತಿದ್ದೆವು ಎಂದು ವ್ಯಂಗ್ಯಭರಿತರಾಗಿ ಹೇಳಿದರು.

ನಾವು ಎಲ್ಲವನ್ನೂ ಮಾಡುತ್ತಿದ್ದೆವು. ಆದರೆ ರಾಜಕೀಯಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡಬಾರದು ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT