ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ: ಪ್ರಧಾನಿ ಮೋದಿ

Published 24 ಮೇ 2024, 7:55 IST
Last Updated 24 ಮೇ 2024, 7:55 IST
ಅಕ್ಷರ ಗಾತ್ರ

ಶಿಮ್ಲಾ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿದರೆ ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ ಜಡಿಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಕಾಂಗ್ರೆಸ್‌ ಮಾಡಿರುವ ಷಡ್ಯಂತ್ರವನ್ನು ಆ ಪಕ್ಷದವರೇ ಬಹಿರಂಗಪಡಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ, ರಾಮ ಮಂದಿರಕ್ಕೆ ಬೀಗ ಜಡಿದು, ಬಾಲರಾಮ ಟೆಂಟ್‌ನಲ್ಲಿ ಕೂರುವುದು ಅನಿವಾರ್ಯವಾಗುವಂತೆ ಮಾಡಲಿದ್ದಾರೆ. ಹೀಗಾಗಿ ಪ್ರತಿ ಮತಗಟ್ಟೆಯಿಂದ ಇವರನ್ನು ಗುಡಿಸಿಹಾಕಬೇಕಿದೆ.ನನ್ನ ಸ್ವಚ್ಛ ಭಾರತ ಅಭಿಯಾನ ನೆನಪಿದೆಯಲ್ಲ, ಜೂನ್‌ 1ರಂದು ಅದಕ್ಕಾಗಿ ಮೀಸಲಿಡಿ' ಎಂದು ಕರೆ ನೀಡಿದ್ದಾರೆ.

'ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷ, ಹಿಂದುಳಿದ ವರ್ಷದವರ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡಿದೆ' ಎಂದು ಗಂಭೀರ ಆರೋಪ ಮಾಡಿರುವ ಅವರು, 'ಕೋಮುವಾದ, ಜಾತೀಯತೆ, ಕುಟುಂಬ ರಾಜಕಾರಣ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳಲ್ಲಿ ಸಾಮಾನ್ಯ' ಎಂದೂ ದೂರಿದ್ದಾರೆ.

'ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೇರಲು ಆಶೀರ್ವಾದ ಮಾಡುವಂತೆ ನಿಮ್ಮನ್ನು ಕೋರಲು ನಾನಿಲ್ಲಿಗೆ ಬಂದಿದ್ದೇನೆ. ಅದು ಸ್ವಾರ್ಥಕ್ಕಾಗಿ ಅಥವಾ ನನ್ನ ಕುಟುಂಬಕ್ಕಾಗಿ ಅಲ್ಲ. ದೇಶದ ಅಭಿವೃದ್ಧಿಗಾಗಿ' ಎಂದು ಒತ್ತಿ ಹೇಳಿದ್ದಾರೆ.

ಹಿಮಾಚಲ ಪ್ರದೇಶದ 4 ಲೋಕಸಭಾ ಕ್ಷೇತ್ರಗಳು ಹಾಗೂ 6 ವಿಧಾನಸಭಾ ಕ್ಷೇತ್ರಗಳಿಗೆ ಜೂನ್‌ 1ರಂದು ಮತದಾನ ನಡೆಯಲಿದೆ.

ಕಳೆದ ವಾರ ಜಾರ್ಖಂಡ್‌ನಲ್ಲಿ ವಿರೋಧ ಪಕ್ಷಗಳ ವಿರುದ್ಧ ಗುಡುಗಿದ್ದ ಮೋದಿ, ಬಾಲರಾಮನನ್ನು ಮತ್ತೆ ಟೆಂಟ್‌ಗೆ ಕಳುಹಿಸಲು ಕಾಂಗ್ರೆಸ್‌ ಪಿತೂರಿ ಮಾಡಿದೆ ಎಂದು ಆರೋಪಿಸಿದ್ದರು.

ಗುರುವಾರ (ಮೇ 23ರಂದು) ಹರಿಯಾಣದಲ್ಲಿ ಮಾತನಾಡುತ್ತಾ, ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ರಾಮ ನಾಮ ಜಪಿಸುವವರನ್ನು ಜೈಲಿಗಟ್ಟಲಿದೆ ಎಂದು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT