ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bharat Jodo Nyay Yatra: ಕಾಂಗ್ರೆಸ್‌ ಯಾತ್ರೆಗೆ ಷರತ್ತುಬದ್ಧ ಅನುಮತಿ

Published 10 ಜನವರಿ 2024, 15:44 IST
Last Updated 10 ಜನವರಿ 2024, 15:44 IST
ಅಕ್ಷರ ಗಾತ್ರ

ಇಂಫಾಲ: ಜನವರಿ 14 ರಂದು ಕಾಂಗ್ರೆಸ್‌ನ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಗೆ ಇಂಫಾಲ್‌ನಿಂದ ಚಾಲನೆ ನೀಡಲು ಮಣಿಪುರ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ಆದರೆ, ಈ ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯ ಜನರು ಭಾಗವಹಿಸಬೇಕು. ಸಾರ್ವಜನಿಕ ಸಭೆ ಹಾಗೂ ರ‍್ಯಾಲಿ ನಡೆಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.

‘ಯಾವುದೇ ಅಹಿತಕರ ಘಟನೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ಜ.14 ರಂದು ಸೀಮಿತ ಸಂಖ್ಯೆಯ ಜನರೊಂದಿಗೆ ಯಾತ್ರೆ ಆರಂಭಿಸಲು ಅನುಮತಿ ನೀಡಲಾಗಿದೆ. ಸರ್ಕಾರವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಮತ್ತು ಹೆಸರುಗಳ ವಿವರಗಳನ್ನು ಮುಂಚಿತವಾಗಿ ಕಚೇರಿಗೆ ಸಲ್ಲಿಸಬೇಕು’ ಎಂದು ಇಂಫಾಲ ಪೂರ್ವ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕಚೇರಿಯು ಆದೇಶದಲ್ಲಿ ತಿಳಿಸಿದೆ.

ವಿಶ್ವದ ಅತ್ಯಂತ ಹಳೆಯ ಪೋಲೊ ಮೈದಾನಗಳಲ್ಲಿ ಒಂದಾಗಿರುವ ಹಫ್ತಾ ಕಾಂಗಜೀಬುಂಗ್‌ ಮೈದಾನದಿಂದ ಯಾತ್ರೆಯನ್ನು ಆರಂಭಿಸುವ ಇರಾದೆ ಹೊಂದಿದ್ದ ಕಾಂಗ್ರೆಸ್‌ ನಾಯಕರು ಕಳೆದ ವಾರ ಸರ್ಕಾರದ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು.

ಭಾರತ್ ಜೋಡೊ ನ್ಯಾಯ ಯಾತ್ರೆಯ ಚಾಲನೆಗೆ ಭಾರೀ ಸಂಖ್ಯೆಯ ಜನ ಸೇರುವ ಸಾದ್ಯತೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚಿನ ಜನರ ಜಮಾವಣೆ ಅಪಾಯಕಾರಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ನೀಡಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ಈಗಾಗಲೆ ಸೆಕ್ಷನ್‌ 144ರ ಅಡಿ ಜನರ ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್‌ ಅಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT