ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ: ಕಾಂಗ್ರೆಸ್‌ ನಾಯಕರು, ಪದಾಧಿಕಾರಿಗಳ ಕಚೇರಿಗಳ ಮೇಲೆ ಇ.ಡಿ ದಾಳಿ

Last Updated 20 ಫೆಬ್ರುವರಿ 2023, 15:34 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ತೆರಿಗೆ ಹಗರಣದ ಜೊತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಕಾಂಗ್ರೆಸ್‌ ಮುಖಂಡರಿಗೆ ಸೇರಿದ ಸ್ಥಳಗಳು ಒಳಗೊಂಡಂತೆ ಛತ್ತೀಸಗಢದ ವಿವಿಧೆಡೆ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ಅವರ ‘ಮೂರನೇ ದರ್ಜೆ’ಯ ರಾಜಕೀಯಕ್ಕೆ ಹೆದರುವುದಿಲ್ಲ ಎಂದಿದೆ. ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ ಕಾಂಗ್ರೆಸ್‌ ಮಹಾ ಅಧಿವೇಶನ ನಡೆಯುವುದಕ್ಕೂ ನಾಲ್ಕು ದಿನಗಳ ಮುನ್ನ ಈ ದಾಳಿ ನಡೆದಿದೆ.

ಕಾಂಗ್ರೆಸ್‌ ಶಾಸಕ ದೇವೇಂದ್ರ ಯಾದವ್‌, ಛತ್ತೀಸಗಢ ಕಾಂಗ್ರೆಸ್‌ ಕೋಶಾಧಿಕಾರಿ ರಾಮ್‌ಗೋಪಾಲ್‌ ಅಗರ್‌ವಾಲ್‌, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸುಶೀಲ್‌ ಸನ್ನಿ ಅಗರ್‌ವಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ವಕ್ತಾರ ಆರ್‌.ಪಿ. ಸಿಂಗ್‌ ಅವರಿಗೆ ಸೇರಿದ ರಾಯಪುರದಲ್ಲಿರುವ ಮನೆ ಮತ್ತು ಸ್ಥಳಗಳಲ್ಲಿ ಹಾಗೂ ಇತರೆಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದೇವೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲಿದ್ದಲು ತೆರಿಗೆ ಹಗರಣದ ‘ಫಲಾನುಭವಿಗಳ’ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದೂ ವಿವರಿಸಿದ್ದಾರೆ.

‘ಇ.ಡಿ. ಶೋಧದ ಮೂಲಕ ಕಾಂಗ್ರೆಸ್‌ ಅನ್ನು ಹೆದರಿಸಲಾಗದು. ಪಕ್ಷದ ಮಹಾ ಅಧಿವೇಶನ ಯಶಸ್ವಿಯಾಗಿ ನಡೆಯಲಿದೆ’ ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹೇಳಿದ್ದಾರೆ.

ಶೋಧದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಇದು ಅಮೃತ ಕಾಲವಲ್ಲ ಅಘೋಷಿತ ತುರ್ತು ಪರಿಸ್ಥಿತಿ ’ ಎಂದಿದ್ದರೆ, ಇ.ಡಿ. ಎಂದರೆ ಪ್ರಜಾಪ್ರಭುತ್ವವನ್ನು ನಿರ್ಮೂಲನೆ ಮಾಡುವುದು ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಬಣ್ಣಿಸಿದ್ದಾರೆ.

ಪ್ರತಿ ಟನ್‌ ಕಲ್ಲಿದ್ದಲು ಸಾಗಣೆಗೆ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳು ಅಕ್ರಮವಾಗಿ ₹25 ವಸೂಲಿ ಮಾಡಿರುವ ಹಗರಣದ ತನಿಖೆಯನ್ನು ಇ.ಡಿ. ನಡೆಸುತ್ತಿದೆ.

ಬೆದರಿಕೆಗಳಿಗೆ ಜಗ್ಗುವುದಿಲ್ಲ: ಖರ್ಗೆ
ನವದೆಹಲಿ:
ಇ.ಡಿ. ಶೋಧವನ್ನು ಖಂಡಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಳೆದ 9 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು ನಡೆಸಿರುವ ಶೋಧಗಳಲ್ಲಿ ಶೇ 95ರಷ್ಟು ವಿರೋಧ ಪಕ್ಷಗಳ ನಾಯಕರ ವಿರುದ್ಧ ಮತ್ತು ಅದರಲ್ಲೂ ಹೆಚ್ಚಿನವು ಕಾಂಗ್ರೆಸ್‌ ನಾಯಕರ ವಿರುದ್ಧವಾಗಿದೆ’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ ಮಹಾ ಅಧಿವೇಶನಕ್ಕೂ ಮುನ್ನ ಛತ್ತೀಸಗಢದಲ್ಲಿ ನಮ್ಮ ಪಕ್ಷದ ಮುಖಂಡರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುವ ಮೂಲಕ ಬಿಜೆಪಿಯು ಹೇಡಿತನ ಪ್ರದರ್ಶಿಸಿದೆ. ಹೇಡಿತನದ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ’ ಎಂದೂ ಅವರು ತಿಳಿದ್ದಾರೆ.

‘ಪ್ರಧಾನಿ ಮೋದಿ ಅವರಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ ಇದ್ದರೆ, ಅವರ ಆತ್ಮೀಯ ಸ್ನೇಹಿತನ ಭಾರಿ ಹಗರಣಕ್ಕೆ ಸಂಬಂಧಿಸಿ ಶೋಧ ಕಾರ್ಯ ನಡೆಸಲು ಆದೇಶ ನೀಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಈ ಪ್ರಯತ್ನವನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಖರ್ಗೆ ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ ಮಾತನಾಡುವುದು ನಾಚಿಕೆಗೇಡು’
(ಜೈಪುರ ವರದಿ)
ಛತ್ತೀಸಗಢದಲ್ಲಿ ನಡೆದಿರುವ ಇ.ಡಿ ಶೋಧವು ರಾಜಕೀಯ ಪ್ರೇರಿತವಾದುದು ಎಂಬ ಕಾಂಗ್ರೆಸ್‌ ಆರೋಪವನ್ನು ಅಲ್ಲಗಳೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಭಷ್ಟಾಚಾರ ವಿಷಯಗಳಿಂದಾಗಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು. ಅದು ನಾಚಿಕೆಗೇಡು’ ಎಂದಿದ್ದಾರೆ

‘ತನಿಖೆ ಸಂಸ್ಥೆಗಳು ಪ್ರಾಥಮಿಕ ಸಾಕ್ಷ್ಯಗಳನ್ನು ಹೊಂದಿದ್ದರೆ ಮಾತ್ರ ತನಿಖೆ ನಡೆಸುತ್ತವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT